ಬೆಂಗಳೂರು,ಮಾ.12- ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ್ದ ಬಾಂಬರ್ ಮೂಲತಃ ಕರಾವಳಿ ಮೂಲದ ವ್ಯಕ್ತಿಯಾಗಿದ್ದು ಆತನಿಗೆ ರಾಜ್ಯ ರಾಜಧಾನಿ ಬೆಂಗಳೂರಿನ ಬಗ್ಗೆ ಇಂಚಿಂಚೂ ಮಾಹಿತಿಯೂ ತಿಳಿದಿತ್ತು. ಹೀಗಾಗಿಯೇ ಆತ ಯಾರಿಗೂ ಸುಳಿವು ನೀಡದಂತೆ ನಗರದಿಂದ ತಲೆಮರೆಸಿಕೊಳ್ಳಲು ಸಾಧ್ಯವಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಬೆಂಗಳೂರಿನ ಆಳ ಅಗಲ ಚೆನ್ನಾಗಿ ಬಲ್ಲವನ್ನಾಗಿದ್ದ ಬಾಂಬರ್ ಮೂಲತಃ ಕರಾವಳಿ ಮೂಲದವನಾಗಿದ್ದು, ಕೆಲ ವರ್ಷಗಳ ಹಿಂದೆ ರಾಜ್ಯ ತೊರೆದು ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ ಆಸ್ತವ್ಯ ಹೂಡಿದ್ದ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡುವ ದಿನ ಬಾಂಬರ್ ಚೆನ್ನೈನಿಂದ ತಿರುಪತಿ ರೈಲಿನಲ್ಲಿ ಬೆಂಗಳೂರಿಗೆ ಬಂದು ಬಾಂಬ್ ಸ್ಪೋಟಿಸಿ ನಂತರ ಬಿಎಂಟಿಸಿ ಬಸ್ನಲ್ಲಿ ರಾಜಾಜಿನಗರದ ಸುಜಾತ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ತುಮಕೂರಿಗೆ ತೆರಳಿ ಅಲ್ಲಿಂದ ಬಳ್ಳಾರಿ ಹಾಗೂ ಹೈದ್ರಾಬಾದ್ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸಂಚರಿಸಿ ನಂತರ ಆತ ಹೈದ್ರಾಬಾದ್ಗೆ ತೆರಳಿ ತಲೆಮರೆಸಿಕೊಂಡಿದ್ದಾನೆ ಎಂಬುದು ಎನ್ಐಗೆ ಗೊತ್ತಾಗಿದೆ.
ರಾಜ್ಯದಲ್ಲಿ ಇದುವರೆಗೂ ಕುಕ್ಕರ್ ಹಾಗೂ ಟಿಫಿನ್ ಬಾಕ್ಸ್ ಬಾಂಬ್ಗಳನ್ನು ಸ್ಪೋಟಿಸಲಾಗಿತ್ತು. ಆದರೆ, ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಿಸಿರುವುದು ಸಿಲ್ವರ್ ಪ್ಲಾಸ್ಟಿಕ್ ಬಾಂಬ್ ಆಗಿರುವುದು ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಹೊಸ ಮಾದರಿಯ ಬಾಂಬ್ ಸ್ಪೋಟಿಸಿರುದರಿಂದ ಬಾಂಬರ್ ಐಸಿಸ್ ಉಗ್ರರ ಅಣತಿ ಮೇರೆಗೆ ಈ ಕೃತ್ಯ ನಡೆಸಿದ್ದಾನೆ ಎನ್ನುವುದು ತಿಳಿದುಬಂದಿದೆ.
ಐಸಿಸ್ ಉಗ್ರ ಸಂಘಟನೆಯಿಂದ ಪ್ರೇರಿಪಿತಗೊಂಡಿದ್ದ ಬಾಂಬರ್ ಆ ಸಂಘಟನೆಯಿಂದ ತರಬೇತಿ ಪಡೆದ ನಂತರವೇ ರಾಮೇಶ್ವರಂ ಕೆಫೆಯಲ್ಲಿ ಸಿಲ್ವರ್ ಪ್ಲಾಸ್ಟಿಕ್ ಮಾದರಿಯ ಬಾಂಬ್ ಸ್ಪೋಟಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಾಂಬ್ ಸ್ಪೋಟಕ್ಕೂ ಮುನ್ನ ಬಾಂಬರ್ ಶಿವನಸಮುದ್ರ, ಗುಂಡ್ಲುಪೇಟೆ, ತಮಿಳುನಾಡಿನ ಕೃಷ್ಣಗಿರಿ ಹಾಗೂ ಕೇರಳ ಗಡಿಭಾಗದ ಅರಣ್ಯಪ್ರದೇಶಗಳಲ್ಲಿ ತರಬೇತಿ ಪಡೆದಿರುವುದು ತನಿಖೆ ವೇಳೆ ಬಯಲಾಗಿದೆ.
ಚಾಣಕ್ಷ ಬಾಂಬರ್ ಇದೀಗ ಹೈದ್ರಾಬಾದ್ ಸುತ್ತಮುತ್ತಲ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇರುವುದರಿಂದ ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಕೇರಳದಲ್ಲಿ ಬೀಡುಬಿಟ್ಟಿರುವ ಎನ್ಐಎ ಅಧಿಕಾರಿಗಳು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.