ಉಡುಪಿ, ನ.21- ಕಾಡಿನಲ್ಲಿ ಅಡಗಿ ಕುಳಿತಿರುವ ನಕ್ಸಲರಿಗೆ ಶರಣಾಗತಿ ವೊಂದೇ ನಿಮಗಿರುವ ದಾರಿ ಎಂಬ ಸಂದೇಶವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಾಬ್ ಮೊಹಂತಿ ನೀಡಿದ್ದಾರೆ.
ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಆದ ಸ್ಥಳಕ್ಕೆ ಪ್ರಣಬ್ ಮೊಹಂತಿ ಅವರು ಭೇಟಿ ನೀಡಿ ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಕಾಡಿನಲ್ಲಿ ಅವಿತಿರುವ ನಕ್ಸಲರು ಶರಣಾಗತಿಯಾಗದಿದ್ದರೆ ಕಾರ್ಯಾಚರಣೆ ಹೊರತು ನಮಗೆ ಬೇರೆ ದಾರಿ ಇಲ್ಲ ಎಂದು ಎಚ್ಚರಿಸಿದ್ದಾರೆ.
ಪೀತಬೈಲ್, ಕಬ್ಬಿನಾಲೆ ಬಚ್ಚಪ್ಪು ಅರಣ್ಯ ಪ್ರದೇಶಗಳ ಬಳಿ ಡಿಜಿಪಿ ಅವರು ಪರಿಶೀಲಿಸಿದ ನಂತರ ಎಎನ್ಎಫ್ ಕ್ಯಾಂಪ್ಗೆ ಭೇಟಿ ಕೊಟ್ಟು ಕೆಲವು ಸೂಚನೆ ನೀಡಿದ್ದಾರೆ. ಡಿಜಿಪಿ ಅವರು ಭೇಟಿ ನೀಡಿದ್ದ ಬೆನ್ನಲ್ಲಿ ಕೂಂಬಿಂಗ್ ಚುರುಕುಗೊಂಡಿದೆ.
ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಿನಾಲೆ ಅರಣ್ಯಪ್ರದೇಶ ವ್ಯಾಪ್ತಿಯ ಪೀತಬೈಲು ಸ್ಥಳದಲ್ಲಿ ದಾಖಲೆಗಳನ್ನು ಸಂಗ್ರ ಹಿಸಲು ಬೆಂಗಳೂರಿನಿಂದ ತಜ್ಞ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನಾಸ್ಥಳವಾದ ಪೀತಬೈಲಿನಲ್ಲಿ ಎಲ್ಲಾ ಮಹತ್ವ ದಾಖಲೆಗಳನ್ನು ಎಫ್ಎಸ್ಎಲ್ ತಂಡ ಪರಿಶೀಲಿಸುತ್ತಿದೆ. ವಿಕ್ರಮ್ಗೌಡ ಎನ್ಕೌಂಟರ್ ಪ್ರಕರಣದಲ್ಲಿ ಖಚಿತ ದಾಖಲೆ ಸಂಗ್ರಹ ಮತ್ತು ಸಾಕ್ಷ್ಯಾಧಾರ ಹೋಲಿಕೆಗಾಗಿ ಎಫ್ಎಸ್ಎಲ್ ತಂಡ ಹಲವು ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ.