ಬೆಳಗಾವಿ,ಡಿ.13- ರಾಜ್ಯದ ಗ್ರಾಮಪಂಚಾಯ್ತಿಗಳಲ್ಲಿ ಇನ್ನು ಮುಂದೆ ತೆರಿಗೆಗೆ ಒಳಪಡುವ ಸಂಪೂರ್ಣ ಆಸ್ತಿಗಳನ್ನು ಮ್ಯಾನ್ಯುಯಲ್ ಸಮೀಕ್ಷೆಯು ಶೀಘ್ರದಲ್ಲೇ ಸರ್ಕಾರದ ವತಿಯಿಂದಲೇ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮಪಂಚಾಯ್ತಿ, ತೆರಿಗೆ ವ್ಯಾಪ್ತಿಗೆ ಬರುವ ಆಸ್ತಿಗಳನ್ನು ಕೇಂದ್ರ ಸರ್ಕಾರದ ಎನ್ಐಸಿ ನಡೆಸುತ್ತದೆ. ಕರ್ನಾಟಕ ಐಟಿ ತಂತ್ರಜ್ಞಾನದಲ್ಲಿ ನಿಪುಣತೆ ಹೊಂದಿರುವುದರಿಂದ ನಮಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನಮಗೆ ಕೇಂದ್ರದಿಂದ ಸಕಾರಾತಕವಾದ ಪ್ರತಿಕ್ರಿಯೆ ಬಂದಿದೆ ಎಂದರು.
ಕಳೆದ ವರ್ಷ ಶೇ.52ರಷ್ಟು ತೆರಿಗೆ ಸಂಗ್ರಹವಾಗಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಶೇ.100ರಷ್ಟು ಗುರಿ ಹಾಕಿಕೊಂಡಿದ್ದರೂ ಇದನ್ನು ತಲುಪಲು ಸಾಧ್ಯವಾಗಿಲ್ಲ. ಏಕೆಂದರೆ ನಾವೇ ಅನೇಕ ಸಂದರ್ಭಗಳಲ್ಲಿ ಕೆಲವರಿಂದ ತೆರಿಗೆ ಪಾವತಿ ಮಾಡದಂತೆ ಒತ್ತಡ ಹಾಕುತ್ತೇವೆ. ಹೀಗಾಗಿ ತಮ ನಿಗದಿತ ಗುರಿ ತಲುಪಲು ಸಾದ್ಯವಾಗಿಲ್ಲ ಎಂದು ಒಪ್ಪಿಕೊಂಡರು.
ಇದಕ್ಕೂ ಮುನ್ನ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡುವ ಸಂಪೂರ್ಣ ಆಸ್ತಿಗಳೆಷ್ಟು? ಮ್ಯಾನ್ಯುಯಲ್ ಸರ್ವೆ ಮಾಡಿದ್ದೇವೆ ಎಂದು ಸರ್ಕಾರ ಹೇಳಿದೆ ಎಂದರು.
ಇದಕ್ಕೆ ಉತ್ತರಿಸಿದ ಪ್ರಿಯಾಂಕ ಖರ್ಗೆ, ನಮ ಸರ್ಕಾರ ಬಂದ ಮೇಲೆ 8 ಲಕ್ಷ ಆಸ್ತಿಗಳನ್ನು ಹೊಸದಾಗಿ ಸೇರ್ಪಡೆ ಮಾಡಿದ್ದೇವೆ. ರಾಜ್ಯದಲ್ಲಿ ಒಟ್ಟು ಸಮೀಕ್ಷೆ ಮಾಡಿರುವ ಆಸ್ತಿಗಳ ಸಂಖ್ಯೆ 1,41,42,124 ಇ-ಸ್ವತ್ತು ಗೊಂದಲಗಳ ಬಗ್ಗೆ ತಮಗೆಲ್ಲ ಗೊತ್ತಿದೆ. ಇ-ಸ್ವತ್ತಿನ ಗೊಂದಲಗಳಿಗೆ ಪರಿಹಾರ ಹುಡುಕಿದ್ದೇವೆ. ಇ-ಸ್ವತ್ತಿನ ನಿರ್ವಹಣೆಯನ್ನು ರಾಜ್ಯ ಸರ್ಕಾರದ ಜವಾಬ್ದಾರಿ ಗೆ ನೀಡುವಂತೆ ಕೇಳಿದ್ದೇವೆ. ಇನ್ನೊಂದು ವರ್ಷದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಬರುವ ರೀತಿ ಮಾಡುತ್ತೇವೆ ಎಂದರು.
ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 28 ಇಲಾಖೆಗಳ ಮೇಲ್ವಿಚಾರಣೆ ಅಧಿಕಾರವನ್ನು ಸ್ಥಳೀಯ ಗ್ರಾಮಪಂಚಾಯ್ತಿಗಳಿಗೆ ಹಸ್ತಾಂತರಿಸಲು ಸಮಯಾವಕಾಶ ಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೇ ನಾಲ್ಕು ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಮಾತುಕತೆ ನಡೆಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ ಸೇರಿದಂತೆ ಮೂರು ಇಲಾಖೆಗಳು ನಮಗೆ ಸಂಪೂರ್ಣ ಸಹಕಾರ ನೀಡಿವೆ. ತೋಟಗಾರಿಕೆ ಇಲಾಖೆಯವರು ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಆಸಕ್ತಿ ವಹಿಸಿರುವುದರಿಂದ ಇದು ಅನುಷ್ಠಾನಗೊಳ್ಳಲು ಕೆಲ ಸಮಯ ಬೇಕಾಗುತ್ತದೆ. ಆದಷ್ಟು ಶೀಘ್ರ ಇದನ್ನು ಸಾಧಿಸಿ ತೋರಿಸುತ್ತೇವೆ ಎಂದರು.
ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 6 ಸಾವಿರ ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಾಗಿತ್ತು. ಇದನ್ನು ಮನ್ನಾ ಮಾಡಲಾಗಿದೆ. ಉಳಿದಿರುವ ಬಾಕಿ ಮೊತ್ತವನ್ನು ಮನ್ನಾ ಮಾಡಬೇಕೆಂಬ ಪ್ರಸ್ತಾವನೆಯಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.