Sunday, September 15, 2024
Homeರಾಜ್ಯಮಲೆನಾಡಲ್ಲಿ ಒತ್ತುವರಿ ತೆರವು ವಿರೋಧಿಸಿ ರೈತರ ಹೋರಾಟಕ್ಕೆ ಶ್ರೀಗಳ ಬೆಂಬಲ

ಮಲೆನಾಡಲ್ಲಿ ಒತ್ತುವರಿ ತೆರವು ವಿರೋಧಿಸಿ ರೈತರ ಹೋರಾಟಕ್ಕೆ ಶ್ರೀಗಳ ಬೆಂಬಲ

swamiji's support to farmers protest

ಬಾಳೆಹೊನ್ನೂರು,ಸೆ.2– ಮಲೆನಾಡು ಭಾಗದಲ್ಲಿ ಅರಣ್ಯ ಒತ್ತುವರಿ ತೆರವು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಾಳೆಹೊನ್ನೂರಿನ ರಂಭಾಪುರ ಶ್ರೀಗಳಾದ ಶ್ರೀ ಡಾ.ವೀರಾಸೋಮೇಶ್ವರ ಜಗದ್ಗುರು ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಅವರು ಬೆಂಬಲ ಘೋಷಿಸಿದರು.

ರಂಭಾಪುರಿ ಪೀಠದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ರಂಭಾಪುರಿ ಸ್ವಾಮೀಜಿ, ಬಹಳಷ್ಟು ಸಣ್ಣ ಕುಟುಂಬಗಳು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ಕಟ್ಟಿಕೊಂಡಿವೆ. ಸರ್ಕಾರ ಅದನ್ನು ಕಾನೂನಿನ ಅಡಿಯಲ್ಲಿ ಸಕ್ರಮಗೊಳಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದರು.

ಕಸ್ತೂರಿರಂಗನ್‌ ವರದಿ ಜಾರಿಯಿಂದ ಆಗುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಅರಣ್ಯ ಸಚಿವರಿಗೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದೇನೆ. ಜನರ ಹಿತಕ್ಕಾಗಿ ರಂಭಾಪುರಿ ಪೀಠವೂ

ಜನಪರ ಹೋರಾಟದಲ್ಲಿ ಭಾಗವಹಿಸಲು ಸಿದ್ಧವಿದೆ ಹಾಗೂ ಹೋರಾಟಕ್ಕೆ ನಮ ಬೆಂಬಲವಿದೆ ಎಂದರು.ರೈತರ ಹಿತಕ್ಕಾಗಿ ನಾವು ದೆಹಲಿಯವರೆಗೆ ಬಂದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಶ್ರೀ ಗುಣನಾಥ ಸ್ವಾಮೀಜಿ, ಶತಮಾನಗಳಿಂದ ಪ್ರಕೃತಿ ವಿಕೋಪ ಆಗುತ್ತಿದೆ. ವಯನಾಡಿನಲ್ಲಿ ನಡೆದಿದ್ದು ಮೊದಲೇನೂ ಅಲ್ಲ. ನಗರೀಕರಣದಿಂದ ಕಾಡು ನಾಶವಾಗಿದೆಯೇ ಹೊರತು ರೈತರಿಂದ ಅಲ್ಲ. ಕಾಫಿ ಗಿಡ ಪರಿಸರಕ್ಕೆ ಪೂರಕವಾಗಿದೆ ಎಂದರು.

ತೋಟ ಮಾಡುವುದರಿಂದ ಗುಡ್ಡ ಕುಸಿಯುವುದಿಲ್ಲ. ರೈತರು ಎಲ್ಲೂ ಹಸಿರನ್ನು ನಾಶ ಮಾಡಿಲ್ಲ. ಎಲ್ಲೋ ಆದ ಘಟನೆಯನ್ನು ರೈತರ ತಲೆಗೆ ಕಟ್ಟುವುದು ಸರಿಯಲ್ಲ. ಎಲ್ಲರ ಬದುಕೂ ಹಸನಾಗಲಿ ಎಂದು ದುಡಿದು ಅನ್ನ ನೀಡುವ ರೈತನ ಬದುಕು ಈಗ ಬೀದಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇರಳದಲ್ಲಿ ಮೇಘಸ್ಫೋಟ ನಡೆದಿರುವುದು ಗುಡ್ಡದಲ್ಲೇ ಹೊರತು ಊರಿನಲ್ಲಿ ಅಲ್ಲ. ಮಠಗಳು ನಡೆಯುತ್ತಿರುವುದು ಅನ್ನದಾತರು ನೀಡುವ ಭಿಕ್ಷೆಯಿಂದಲೇ. ಒತ್ತುವರಿ ತೆರವು ವಿರುದ್ಧದ ಹೋರಾಟಕ್ಕೆ ಮಠದ ಸಂಪೂರ್ಣ ಬೆಂಬಲವಿದೆ ಎಂದರು.

ಮಲೆನಾಡು ರೈತರ, ಕಾರ್ಮಿಕರ ಹಿತಾಸಕ್ತಿಗಾಗಿ ನಾವು ಹೋರಾಟಕ್ಕೆ ಸದಾ ಸಿದ್ಧ ಎಂದು ಶ್ರೀಗಳು ನುಡಿದರು.ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿನ ಕಂದಾಯ ಭೂಮಿಯನ್ನು 4(1) ನೋಟಿಫಿಕೇಷನ್‌ನಡಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಮೂಲಕ ಮಲೆನಾಡನ್ನು ಜನರಹಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಶಿರಸಿಯ ವಕೀಲ ಎ.ರವೀಂದ್ರ ನಾರಾಯಣ ನಾಯ್ಕ್ ಮಾತನಾಡಿ, ಜನಾಂದೋಲನದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ವಕೀಲ ಸುಧೀರ್‌ಕುಮಾರ್‌ ಮುರೊಳ್ಳಿ ಮಾತನಾಡಿ ಒತ್ತುವರಿ ವಿರೊಧಿಸಿ ಶೀಘ್ರದಲ್ಲೇ ಶಿವಮೊಗ್ಗವನ್ನು ಕೇಂದ್ರವನ್ನಾಗಿಸಿ ಕೊಂಡು ನ್ಯಾಯವಾದಿಗಳ ಸಭೆ ನಡೆಸ ಲಾಗುವುದು ಎಂದು ತಿಳಿಸಿದರು.

ಶೀಘ್ರದಲ್ಲೇ ವಿವಿಧ ಸಂಘಟನೆಯ ಮುಖಂಡರು, ಶಾಸಕರು, ಅರಣ್ಯ ಸಚಿವರ ಸಭೆಯನ್ನು ಆಯೋಜಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಆಶ್ವಾಸನೆ ನೀಡಿದರು.

ಒತ್ತುವರಿ ಪ್ರಕರಣ ಈ ಸ್ವರೂಪ ತಾಳಲು ಕೇಂದ್ರ ಸರ್ಕಾರದ ಕರಾಳ ಕಾನೂನು ಕಾರಣ ಎಂದು ನರಸಿಂಹರಾಜಪುರದ ಮನೋಹರ್‌ ಅಭಿಪ್ರಾಯಪಟ್ಟರು. ಸಭೆಯಲ್ಲಿ ಸಂಘಟನೆ ಅಧ್ಯಕ್ಷ ಅನಿಲ್‌ ಹೊಸಕೊಪ್ಪ, ಪರಿಸರವಾದಿ ಕಲ್ಕುಳಿ ವಿಠಲಹೆಗ್ಡೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖ ನಿರ್ಣಯಗಳು
*ಸೆಕ್ಷನ್‌ 4 ಉದ್ಘೋಷಣೆ ವಾಪಸ್‌‍ ಪಡೆಯಬೇಕು.

  • ಏ.15ನ್ನು ಮಲೆನಾಡು ದಿನವನ್ನಾಗಿ ಆಚರಿಸಬೇಕು.
  • ಪ್ರಸ್ತುತ ಇರುವ ಮೀಸಲು ಅರಣ್ಯವನ್ನು ವಿಸ್ತರಿಸಬಾರದು
  • ಭೂ ಪರಿಮಿಯ ಆಧಾರದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರವನ್ನು ಪುನರ್‌ ವಿಂಗಡಿಸಬೇಕು
  • ಭೂ ಮಂಜೂರಾತಿಯ ಕಾಲ ಮಿತಿಯನ್ನು 75 ವರ್ಷಗಳಿಂದ 25 ವರ್ಷಕ್ಕೆ ಇಳಿಸಬೇಕು ಎಂಬಿತ್ಯಾದಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
RELATED ARTICLES

Latest News