ಚೆನ್ನೈ,ಜೂ.21- ತಮಿಳುನಾಡಿನ ಕಲ್ಲಕುರಿಚಿಯ ಕರುಣಾಪುರಂನಲ್ಲಿ ನಕಲಿ ಮದ್ಯ ಸೇವಿಸಿ ಮತ್ತೆ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದು, ಈ ಮೂಲಕ ಕಲ್ಲಕುರಿಚಿ ಅಕ್ರಮ ಮದ್ಯ ಸೇವನೆ ದುರಂತದಲ್ಲಿ ಮತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ನಕಲಿ ಮದ್ಯ ಸೇವಿಸಿ ಅಸ್ವಸ್ಥಗೊಂಡಿರುವ 115 ಮಂದಿಯನ್ನು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮತ್ತು ಸೇಲಂ, ವಿಲ್ಲುಪುರಂ, ಪುದುಚೇರಿಯ ಜಿಪರ್‌ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ 25 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಅಕ್ರಮ ಮದ್ಯ ಸೇವಿಸಿ ಸಾವಿಗೀಡಾದ ಮತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ ಸಚಿವ ಉದಯನಿಧಿ ಸ್ಟಾಲಿನ್ ಅವರು ಸಂತ್ರಸ್ತರಿಗೆ ಸಹಾಯಧನದ ಚೆಕ್ ವಿತರಿಸಿ, ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿನ್ನೆ ಕಲ್ಲಕುರಿಚಿಯ ಕರುಣಾಪುರಂ ಪ್ರದೇಶದಲ್ಲಿ ಅಕ್ರಮ ಮದ್ಯ ಸೇವಿಸಿ ಸಾವಿಗೀಡಾದ ಸಂತ್ರಸ್ತರ ಶವಗಳನ್ನು ಸುಡಲಾಯಿತು.ಸಾವಿಗೆ ಕಾರಣವಾದ ಮೆಥೆನಾಲ್ ಮೂಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಸಿಎಂ ಸ್ಟಾಲಿನ್ ಹೇಳಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ.
ಈ ಘೋರ ದುರಂತದ ವಿರುದ್ಧ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುವುದು ಎಂದು ಪ್ರತಿಪಕ್ಷದ ಮುಖಂಡರು ತಿಳಿಸಿದ್ದಾರೆ.