Wednesday, July 16, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರವಾಸಿ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರವಾಸಿ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

Temporary restrictions on some tourist places in Chikkamagaluru district

ಚಿಕ್ಕಮಗಳೂರು,ಜು.16- ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್‌.ಮೀನಾ ನಾಗರಾಜ್‌ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿರಿಪ್ರದೇಶದ ಕೆಲವು ಭಾಗಗಳಲ್ಲಿ ಗುಡ್ಡ ಕುಸಿತದಿಂದ ಅಲ್ಲಲ್ಲಿ ಮಣ್ಣು ಆವರಿಸಿದ್ದು, ರಸ್ತೆ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ನಿಯಮಾನುಸಾರ ಪ್ರವಾಸಿಗರು ತಮ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದರು.

ಪ್ರವಾಸಿಗರು ಬರುವ ವಾಹನಗಳಿಗೆ ಸ್ಥಳೀಯವಾಗಿ ಗುರುತಿಸಿರುವ ಸ್ಥಳಗಳಲ್ಲಿ ತಮ ವಾಹನಗಳನ್ನು ನಿಲುಗಡೆಗೊಳಿಸಿ ಸ್ಥಳೀಯ ಲಘು ವಾಹನಗಳಲ್ಲಿ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ತೆರಳಬಹುದು. ಪ್ರವಾಸಿಗರನ್ನು ಕರೆದೊಯ್ಯಲು ಬೆಳಿಗ್ಗೆ 100 ಹಾಗೂ ಸಂಜೆ 100 ವಾಹನಗಳನ್ನು ಮಾತ್ರ ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ಅನುಕೂಲವಾಗಲೆಂದು ಆನ್ಲೈನ್ನಲ್ಲಿ ನೋಂದಣಿ ಉಚಿತವಾಗಿದ್ದು, ಸಂಪೂರ್ಣ ಮಾಹಿತಿ ಅಲ್ಲಿಯೇ ಸಿಗುವುದರಿಂದ ತಪ್ಪದೇ ನಿಯಮಗಳನ್ನು ಪಾಲಿಸಬೇಕು. ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್‌ ಮತ್ತಿತರ ವಸ್ತುಗಳನ್ನು ಕೊಂಡೊಯ್ಯಬಾರದು. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಗೆ ಒತ್ತು ನೀಡುವಂತೆ ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲತೆಗಳನ್ನು ಹೆಚ್ಚಿಸಲು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿ ಜಾಲವನ್ನು ಸೃಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ವಾಹನ ದಟ್ಟಣೆಯಿಂದ ಗಿರಿಪ್ರದೇಶದಲ್ಲಿ ರಸ್ತೆ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಆತಿಥ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅನುವಾಗುವಂತೆ ಆಹಾರ ಮತ್ತು ಪಾನೀಯ ವಿತರಣೆ, ಕೊಠಡಿ ನಿರ್ವಹಣೆ, ಸ್ವಾಗತಗಾರಿಕೆ ಹಾಗೂ ವಿವಿಧ ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಡಿ ತರಬೇತಿಗಳನ್ನು ಹಮಿಕೊಳ್ಳಲಾಗಿದೆ. ಕನಿಷ್ಠ 20ರಿಂದ 45 ವರ್ಷ ವಯೋಮಿತಿಯವರಿಗೆ ಈ ತರಬೇತಿ ನೀಡಲಾಗುತ್ತಿದ್ದು, ಉಚಿತ ಊಟ, ವಸತಿ ಹಾಗೂ ಪ್ರೋತ್ಸಾಹಧನ ನೀಡಲಾಗುವುದು.

ಜಿಲ್ಲೆಯ ಅಭ್ಯರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.ಡಿವೈಎಸ್ಪಿ ಶೈಲೇಂದ್ರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಶ್ರೀಧರ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಲೋಹಿತ್‌ ಸೇರಿದಂತೆ ಅರಣ್ಯ, ಮೆಸ್ಕಾಂ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News