ಬೆಂಗಳೂರು,ಏ.7- ರಾಜ್ಯದಲ್ಲಿ ಕಾಲರಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದೆ. ಬೆಂಗಳೂರು, ನಗರ ಜಿಲ್ಲೆ ಹಾಗೂ ರಾಮನಗರದಲ್ಲಿ ಸಾಂಕ್ರಾಮಿಕ ರೋಗದ ಪ್ರಮಾಣ ಏರಿಕೆಯಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಮಂದಿಗೆ ಕಾಲರಾ ಇರುವುದು ಪತ್ತೆಯಾಗುತ್ತಿದ್ದಂತೆ ನಗರ ಜಿಲ್ಲೆಯಲ್ಲಿ ಆರು ಹಾಗೂ ರಾಮನಗರದಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 49 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲರಾ ಇರುವ ಶಂಕೆ ವ್ಯಕ್ತವಾಗಿದ್ದು ಮೂವರಿಗೆ ಕಾಲರಾ ಇರುವುದು ದೃಢಪಟ್ಟಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲರಾ ಇರುವುದು ದೃಢಪಡುತ್ತಿದ್ದಂತೆ ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಿಚನ್ ಬಂದ್ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಕ್ಟೋರಿಯಾ ಆಸ್ಪತ್ರೆ ಕಿಚನ್ ನಿಂದ ತಿಂಡಿ, ಊಟ ಸಪ್ಲೈ ಮಾಡಲಾಗುತ್ತಿದೆ.ಇಂದು ಬೆಳಗ್ಗೆ ವಿದ್ಯಾರ್ಥಿಗಳಿಗೆ ಬ್ರೆಡ್ ಹಾಗೂ ಬಾಳೆಹಣ್ಣು ಹಂಚಿಕೆ ಮಾಡಲಾಗಿದೆ.
ಹಾಸ್ಟೆಲ್ ವಾರ್ಡನ್ ಸಸ್ಪೆಂಡ್; ಮೆಡಿಕಲ್ ಕಾಲೇಜಿನ ಹಾಸ್ಟೆಲ್‍ನಲ್ಲಿ ಕಾಲರಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ವಾರ್ಡನ್ ಅಖಿಲಾಂಡೇಶ್ವರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಹಾಸ್ಟೆಲ್ ತೊರೆದ ವಿದ್ಯಾರ್ಥಿಗಳು: ಕಾಲರಾ ಇರುವುದು ತಿಳಿಯುತ್ತಿದ್ದಂತೆ ಕೆಲ ಮೆಡಿಕಲ್ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿರುವ ಕೆಲ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡಿ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಅಲ್ಲೇ ಉಳಿದುಕೊಂಡಿರುವ ವಿದ್ಯಾರ್ಥಿಗಳು ಅಲ್ಲಿನ ನೀರು ಕುಡಿಯದೆ ಬಾಟಲ್ ವಾಟರ್‍ಗೆ ಮೊರೆ ಹೋಗಿದ್ದಾರೆ.