Friday, December 13, 2024
Homeರಾಜ್ಯಮಾಧುಸ್ವಾಮಿಯನ್ನು ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ಮಾಧುಸ್ವಾಮಿಯನ್ನು ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ

ತುಮಕೂರು,ಏ.7- ಚುನಾವಣಾ ಕಣದಲ್ಲಿ ನಾನಾ ರೀತಿಯ ಕುತೂಹಲಕಾರಿ ಘಟನೆಗಳು ವರದಿಯಾಗುತ್ತಿವೆ.
ತುಮಕೂರಿನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಇಂದು ಬಿಜೆಪಿಯ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜೆ.ಸಿ.ಮಾಧುಸ್ವಾಮಿಯವರು ಬಿಜೆಪಿಯ ಚಿಂತಕರ ಚಾವಡಿಯ ಪ್ರಮುಖ ನಾಯಕರು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಪಕ್ಷಗಳ ವಾಗ್ದಾಳಿಗೆ ಗುರಾಣಿಯಂತೆ ಬಳಕೆಯಾಗುತ್ತಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ರ್ಪಧಿಸುವಂತೆ ಬಿಜೆಪಿಯ ರಾಜ್ಯ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು. ಆಸಕ್ತಿ ಇಲ್ಲದೇ ಇದ್ದರೂ ಎರಡು-ಮೂರು ಬಾರಿ ಒತ್ತಡ ಹೇರಿದ ಕಾರಣಕ್ಕೆ ಮಾಧುಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸ್ರ್ಪಧಿಸಲು ಮುಂದಾಗಿದ್ದರು. ಆದರೆ ಇತ್ತ ಬಿಜೆಪಿಯ ಮಾಜಿ ಸಚಿವ ವಿ.ಸೋಮಣ್ಣ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದ ಅಸಮಾಧಾನಗೊಂಡ ಜೆ.ಸಿ.ಮಾಧುಸ್ವಾಮಿ, ಒಂದು ಹಂತದಲ್ಲಿ ಬಿಜೆಪಿ ಪಕ್ಷವನ್ನು ತೊರೆಯಲು ಮುಂದಾಗಿದ್ದರು. ಯಡಿಯೂರಪ್ಪ ಅವರು ಮಾಧುಸ್ವಾಮಿಯವರ ಮನೆಗೆ ಹೋಗಿ ಸಮಾಧಾನಪಡಿಸಿದರು. ಈ ನಡುವೆ ಸಚಿವ ಸೋಮಣ್ಣ ಅವರು ಮಾಧುಸ್ವಾಮಿ ಪ್ರಚಾರಕ್ಕೆ ಬರದಿದ್ದರೂ ಸರಿ ಎಂಬ ಹೇಳಿಕೆ ನೀಡಿದ್ದರು ಎಂಬ ವದಂತಿಗಳು ಹರಡಿದ್ದವು. ಇದರಿಂದ ಬೇಸರಗೊಂಡ ಮಾಧುಸ್ವಾಮಿ, ಬಿಜೆಪಿಯಲ್ಲಿಯೇ ಇರುತ್ತೇನೆ. ಆದರೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ತುಮಕೂರಿನ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳದ ಮಾಧುಸ್ವಾಮಿ, ನೆರೆಯ ಜಿಲ್ಲೆ ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು. ಇಂದು ಎಸ್.ಪಿ.ಮುದ್ದಹನುಮೇಗೌಡ ಅವರ ಭೇಟಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೂ ಕೆಲವೇ ದಿನಗಳ ಮೊದಲು ಮರಳಿ ಸೇರ್ಪಡೆಯಾದ ಎಸ್.ಪಿ.ಮುದ್ದಹನುಮೇಗೌಡ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ.
ಇಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದಲ್ಲಿರುವ ಮಾಧುಸ್ವಾಮಿಯವರ ಮನೆಗೆ ಎಸ್.ಪಿ.ಮುದ್ದಹನುಮೇಗೌಡ ಭೇಟಿ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಮಾಧುಸ್ವಾಮಿ ಆತ್ಮೀಯವಾಗಿ ಬರಮಾಡಿಕೊಂಡಿದ್ದು ಕಂಡುಬಂದಿದೆ.

RELATED ARTICLES

Latest News