Friday, November 22, 2024
Homeಬೆಂಗಳೂರುಮಹಿಳೆಯ ಕಾರು ಹಿಂಬಾಲಿಸಿ ಕಿರುಕುಳ ನೀಡಿದ ಇಬ್ಬರು ವಶಕ್ಕೆ

ಮಹಿಳೆಯ ಕಾರು ಹಿಂಬಾಲಿಸಿ ಕಿರುಕುಳ ನೀಡಿದ ಇಬ್ಬರು ವಶಕ್ಕೆ

ಬೆಂಗಳೂರು,ಏ.1- ಇಂಡಿಕೇಟರ್ ಹಾಕದ ವಿಚಾರಕ್ಕೆ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದ ಸ್ಕೂಟರ್ ಸವಾರ ಸೇರಿದಂತೆ ಇಬ್ಬರನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಲ್ಸೆಂಟರ್ ಉದ್ಯೋಗಿ ಜಗನ್ನಾಥ್, ತೇಜಸ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಖಾಸಗಿ ಕಂಪನಿಯೊಂದರ ಸೀನಿಯರ್ ಮಹಿಳಾ ಅಕೌಂಟೆಂಟ್ ನಿನ್ನೆ ಪತಿ ಹಾಗೂ ಮಗುವಿನೊಂದಿಗೆ ಕಾರಿನಲ್ಲಿ ಸೆಂಟ್ಜಾನ್ ಆಸ್ಪತ್ರೆಗೆ ಹೋಗಿ ವಾಪಸ್ ರಾತ್ರಿ 9.30ರ ಸುಮಾರಿನಲ್ಲಿ ಬೇಗೂರಿನ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು.

ಕಾರನ್ನು ಪತಿ ಚಲಾಯಿಸುತ್ತಿದ್ದರು. ಕಾರು ಮಡಿವಾಳದಿಂದ ಕೋರಮಂಗಲದ ಕಡೆಗೆ ಹೋಗುತ್ತಿದ್ದಾಗ ಅಂಡರ್ಪಾಸ್ನಲ್ಲಿ ಒಂದೇ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಮೂವರು ಸವಾರರು ಕಾರಿನ ಹಿಂದೆ ಬರುತ್ತಿದ್ದರು. ಆ ವೇಳೆ ಮಾರ್ಗಮಧ್ಯೆ ಕಾರು ಯಾವುದೇ ಇಂಡಿಕೇಟರ್ ಹಾಕದೆ ಏಕಾಏಕಿ ತಿರುವು ಪಡೆದುಕೊಂಡಾಗ ಸ್ಕೂಟರ್ ಕಾರಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.

ತಕ್ಷಣ ಸ್ಕೂಟರ್ ಸವಾರ ನಿಯಂತ್ರಿಸಿಕೊಂಡು ಕಾರನ್ನು ತಡೆದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಇಂಡಿಕೇಟರ್ ಹಾಕದಿರುವ ಬಗ್ಗೆ ಕೇಳಿದ್ದಾರೆ.ಆ ಸಂರ್ಭದಲ್ಲಿ ಆ ವ್ಯಕ್ತಿ ಕಾರು ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದಾಗ ಸ್ಕೂಟರ್ ಸವಾರರು ಅತಿ ವೇಗವಾಗಿ ಹಿಂಬಾಲಿಸಿಕೊಂಡು ಬರುತ್ತಿರುವುದು ಗಮನಿಸಿ ಮಹಿಳೆ ಆತಂಕಗೊಂಡಿದ್ದಾರೆ.

ತಕ್ಷಣ ಮಹಿಳೆ ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಈ ಕಾರು ಬಂದ ಮಾರ್ಗದಲ್ಲಿನ ಸಿಸಿಟಿವಿ ಪರಿಶೀಲಿಸಿ ಅದರಲ್ಲಿ ಸೆರೆಯಾಗ್ದಿ ದೃಶ್ಯಾವಳಿ ಆಧರಿಸಿ ಮೊದಲು ಜಗನ್ನಾಥ್ನನ್ನು ವಶಕ್ಕೆ ಪಡೆದು ನಂತರ ತೇಜಸ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಚಾರಣೆ ವೇಳೆ, ಅಂಡರ್ಪಾಸ್ನಲ್ಲಿ ನಾವು ಮೂವರು ಸ್ನೇಹಿತರು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಈ ಕಾರು ಇಂಡಿಕೇಟರ್ ಹಾಕದೆ ಏಕಾಏಕಿ ತಿರುವು ಪಡೆದುಕೊಂಡಿದ್ದರಿಂದ ನಾವು ಡಿಕ್ಕಿ ಹೊಡೆಯುತ್ತಿದ್ದವು. ಅದನ್ನು ತಪ್ಪಿಸಿ ಕೇಳಿದಾಗ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮಧ್ಯದ ಬೆರಳು ತೋರಿಸಿ ಕಾರನ್ನು ನಿಲ್ಲಿಸದೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಹಾಗಾಗಿ ಕಾರನ್ನು ಹಿಂಬಾಲಿಸಿದ್ದಾಗಿ ತಿಳಿಸಿದ್ದಾರೆ. ಪೊಲೀಸರು ಆರೋಪಿಗಳಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News