ಬ್ಯಾಂಕಾಕ್,ಆ.23- ಥೈಲೆಂಡ್‌ನಲ್ಲಿ ಪ್ರಯಾಣಿಕರ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಬ್ಯಾಂಕಾಂಕ್‌ನಿಂದ ಟೇಕ್ ಆಫ್ ಆಗಿ ಸುಮಾರು 40 ಕಿ.ಮೀ ದೂರದಲ್ಲಿರುವ ವ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ.
ವಿಮಾನದಲ್ಲಿ 7 ಪ್ರಯಾಣಿಕರಿದ್ದರು, ಇಬ್ಬರು ಪೈಲಟ್‌ಗಳು ಇದ್ದರು, ವಿಮಾನದಲ್ಲಿದ್ದವರ ಗುರುತು ತಕ್ಷಣವೇ ಪತ್ತೆಯಾಗಿಲ್ಲ ಆದರೆ ವಿಮಾನದಲ್ಲಿದ್ದವರಲ್ಲಿ ಹಾಂಕಾಂಗ್‌ನ ಐವರು, ಚೀನೀ ಪ್ರವಾಸಿಗರು ಹಾಗೂ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಥಾಯ್ ಫ್ಲೈಯಿಂಗ್ ಸರ್ವೀಸ್ ಕಂಪನಿಯಿಂದ ನಿರ್ವಹಿಸಲ್ಪಡುವ ಸೆಸ್ನಾ ಕಾರವಾನ್ ನಿನ್ನೆ ಮಧ್ಯಾಹ್ನ 2.46ಕ್ಕೆ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ 11 ನಿಮಿಷಗಳ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕವನ್ನು ಕಳೆದುಕೊಂಡರು. ಆ ಸಮಯದಲ್ಲಿ ವಿಮಾನವು ನಿಲ್ದಾಣದಿಂದ 35 ಕಿಲೋಮೀಟರ್ ದೂರದಲ್ಲಿತ್ತು ಎಂದು ತಿಳಿದುಬಂದಿದೆ.
300ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಶೋಧ ಕಾರ್ಯದಲ್ಲಿ ನಿಯೋಜಿಸಲಾಗಿದ್ದು, ಅಪಘಾತದ ಕಾರಣವನ್ನು ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.