ಬೆಂಗಳೂರು, ಅ.5- ಸಹಚರರೊಂದಿಗೆ ಸೇರಿಕೊಂಡು ರಾತ್ರಿ ವೇಳೆ ಮನೆಗಳ ಬೀಗ ಮುರಿದು ಹಣ, ಆಭರಣ ದೋಚುತ್ತಿದ್ದ ಆರೋಪಿಯೊಬ್ಬನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ 8.50 ಲಕ್ಷರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ರಘುವನಹಳ್ಳಿಯ ಬಾಲಾಜಿ ಲೇಔಟ್ ನಿವಾಸಿ ರಘು ಅಲಿಯಾಸ್ ಪೆಪ್ಸಿ (24) ಬಂಧಿತ ಆರೋಪಿ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಮಂಗನಹಳ್ಳಿಯ ಎಸ್‌ಎಂವಿ ಲೇಔಟ್ ನಿವಾಸಿ ನಯಾಜ್ ಖಾನ್ ಅವರ ಮನೆಯ ಬೀಗ ಮುರಿದು ಸುಮಾರು 220ಗ್ರಾಂ ಚಿನ್ನಾಭರಣಗಳು, 50 ಸಾವಿರ ರೂ. ನಗದು ಹಾಗೂ ಕೆಟಿಎಂ ಬೈಕ್ ಕಳವಾಗಿರುವ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿ ಹಳೆ ಆರೋಪಿ ರಘುನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸ್ನೇಹಿತರಾದ ಮಿಥುನ್, ದೀಪಕ್ ಹಾಗೂ ಜೈದೀಪ್ ಜೊತೆ ಸೇರಿ ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ.ಈಗಾಗಲೇ ಈ ಮೂವರು ಸ್ನೇಹಿತರು ರಾಜರಾಜೇಶ್ವರಿ ನಗರ ಠಾಣೆಯ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಆರೋಪಿಯ ಬಂಧನದಿಂದ ಜ್ಞಾನಭಾರತಿ ಠಾಣೆಯ ಮೂರು ಕನ್ನಗಳವು ಪ್ರಕಣಗಳಿಗೆ ಸಂಬಂಧಿಸಿದಂತೆ 8.50 ಲಕ್ಷ ರೂ. ಮೌಲ್ಯದ 120ಗ್ರಾಂ ಚಿನ್ನದ ಆಭರಣಗಳು ಹಾಗೂ ಜಿಗಣಿ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧ ಪಟ್ಟ ಒಂದು ದ್ವಿ ಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ತಮಿಳುನಾಡಿನ ಕೊಯಮತ್ತೂರು ಠಾಣೆಯ 2 ಕನ್ನಗಳವು ಪ್ರಕರಣಗಳು ಮತ್ತು ಆಂಧ್ರಪ್ರದೇಶದ ಚಿತ್ತೂರು ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 22 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿರುವುದು ತನಿಖೆ ವೇಳೆ ಕಂಡುಬಂದಿದೆ.
ಇನ್‌್ಸಪೆಕ್ಟರ್ ರವಿ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.