Saturday, May 11, 2024
Homeರಾಜ್ಯಬರಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾನೂನು ಪಾಲಿಸಿಲ್ಲ : ಸಿದ್ದು ವಾಗ್ದಾಳಿ

ಬರಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾನೂನು ಪಾಲಿಸಿಲ್ಲ : ಸಿದ್ದು ವಾಗ್ದಾಳಿ

ಬೆಂಗಳೂರು,ಏ.28- ಬರಪರಿಹಾರ ಪಾವತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ ಮೇಲೆ ಅನಿವಾರ್ಯವಾಗಿ ಪರಿಹಾರ ನೀಡುವುದಾಗಿ ಹೇಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ನೀಡಿರುವ ಬರಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ, ಬರ ಘೋಷಣೆಗಾಗಿ ಮನವಿ ಸಲ್ಲಿಸಿದ ವಾರದೊಳಗಾಗಿ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಬೇಕು, ವರದಿ ನೀಡಿದ ಒಂದು ತಿಂಗಳ ಒಳಗೆ ಪರಿಹಾರ ನೀಡಬೇಕು.

ರಾಜ್ಯಸರ್ಕಾರ ಸೆ. 22 ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆನಂತರ ತಾವು ಖುದ್ದಾಗಿ ಡಿ.19 ರಂದು ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕಾಯಿತು. 48 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದು, ಇದರ ಅಂದಾಜು ವೌಲ್ಯ 35 ಸಾವಿರ ಕೋಟಿ ರೂ.ಗಳು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ, 18,172 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು.

ಸುಪ್ರೀಂಕೋರ್ಟ್‌ ಚಾಟಿ ಬೀಸಿದ ಮೇಲೆ 15 ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಹೇಳಿತ್ತು. ಮತ್ತೆ ಹೆಚ್ಚುವರಿಯಾಗಿ ಒಂದು ವಾರ ಸಮಯ ಕೇಳಿ ಈಗ ಪ್ರಸ್ತಾವನೆ ಸಲ್ಲಿಸಿದ್ದರ ಪೈಕಿ ಶೇ.19 ರಷ್ಟು ಪರಿಹಾರ ನೀಡುವುದಾಗಿ ಹೇಳಿದೆ. 3,454 ಕೋಟಿ ರೂ. ಪರಿಹಾರ ನೀಡುವುದಾಗಿ ಹೇಳಿದೆ. 14,718 ಕೋಟಿ ರೂ. ಕೊಡುತ್ತಿಲ್ಲ ಎಂದು ವಿವರಿಸಿದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಅಮಿತ್‌ ಶಾ ಅವರುಗಳು ರಾಜ್ಯಕ್ಕೆ ಬಂದು ಸುಳ್ಳು ಹೇಳಿದರು. ಪ್ರಸ್ತಾವನೆ ಸಲ್ಲಿಸುವುದು ತಡವಾಗಿದೆ ಎಂದಾಗಿದ್ದರೆ, ತಾವು ಭೇಟಿ ಮಾಡಿದ್ದಾಗಲೇ ಅಮಿತ್‌ ಶಾ ಹೇಳಬಹುದಿತ್ತು. ದ್ವೇಷದ ರಾಜಕಾರಣಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿಲ್ಲ, ಬರಪೀಡಿತ ರೈತರ ಪರಿಹಾರಕ್ಕೆ ಹಣ ಕೇಳುತ್ತಿದ್ದೇವೆ. ನಾವು ಸಂಗ್ರಹಿಸಿಕೊಟ್ಟ ತೆರಿಗೆಯಲ್ಲಿ ನಮಗೆ ಸರಿಯಾದ ಪಾಲು ನೀಡುವುದು ಮತ್ತು ರೈತರಿಗೆ ಪರಿಹಾರ ನೀಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಗಾಂಧಿ ಪ್ರತಿಮೆಯಿಂದ ದೇವರಾಜ ಅರಸು ಪ್ರತಿಮೆವರೆಗೂ ಪಾದಯಾತ್ರೆ ನಡೆಸಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟ ಮುಂದುವರೆಸುತ್ತೇವೆ ಎಂದರು.

ಸುಪ್ರೀಂಕೋರ್ಟ್‌ ಮೊರೆ ಹೋದ ನಂತರ ಪರಿಹಾರ ಪಾವತಿಸಲು ಕೇಂದ್ರ ಮುಂದಾಗಿದೆಯೇ ಹೊರತು ಸ್ವಯಂಪ್ರೇರಿತವಾಗಿ ಹಣ ಕೊಟ್ಟಿಲ್ಲ. ಬಿಜೆಪಿಯ ನಾಯಕರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್‌.ಅಶೋಕ್‌ ಸೇರಿದಂತೆ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯ ಮಾನವ ಉದ್ಯೋಗ ದಿನಗಳ ಸಂಖ್ಯೆಯನ್ನು 150 ದಿನಗಳಿಗೆ ಹೆಚ್ಚಿಸಿಲ್ಲ. ಇಂದು ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿಯವರು ಜನರಿಗೆ ಚೊಂಬು ನೀಡಿದ್ದಾರೆ. ಮೇಕೆದಾಟು, ಮಹದಾಯಿ, ಬರಪರಿಹಾರ, ತೆರಿಗೆ ಹಂಚಿಕೆ ಸೇರಿದಂತೆ ಎಲ್ಲದರಲ್ಲೂ ಚೊಂಬು ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

34 ಲಕ್ಷ ರೈತರಿಗೆ ರಾಜ್ಯಸರ್ಕಾರ ತನ್ನ ಬೊಕ್ಕಸದಿಂದಲೇ ತಲಾ 2 ಸಾವಿರ ರೂ. ಪರಿಹಾರವನ್ನು ಪಾವತಿಸಿದೆ. ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ದೊರೆಯುತ್ತಿದೆ. ಯಾವ ರೈತರೂ ಪರಿಹಾರ ಸಿಕ್ಕಿಲ್ಲ ಎಂದು ದೂರು ನೀಡಿಲ್ಲ. ಕುಮಾರಸ್ವಾಮಿ ಸುಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ. ನಾವು ರೈತರಿಗೆ ಪರಿಹಾರ ನೀಡುತ್ತಿದ್ದೇವೆಯೇ ಹೊರತು ಕುಮಾರಸ್ವಾಮಿಯವರಿಗಲ್ಲ ಎಂದು ತಿರುಗೇಟು ನೀಡಿದರು.

RELATED ARTICLES

Latest News