ಬೆಂಗಳೂರು,ನ.6- ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡಿದ ಹಣ, ಆಭರಣಗಳಲ್ಲಿ ಸ್ವಲ್ಪ ಹುಂಡಿಗೂ ಹಾಕಿ, ಮನೆಗೂ ಕೊಟ್ಟು ಉಳಿದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ನಟೋರಿಯಸ್ ಕಳ್ಳನ ಕಥೆಯೇ ರೋಚಕ.
ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳ ಅಸ್ಲಾಂ ಪಾಷ 20 ವರ್ಷಗಳಿಂದಲೂ ಈ ವೃತ್ತಿಯಲ್ಲೇ ತೊಡಗಿದ್ದು, ಇದುವರೆಗೂ ಮಾಡಿರುವುದು 150ಕ್ಕೂ ಹೆಚ್ಚು ಕಳ್ಳತನ.
ಈತನ ತಂದೆತಾಯಿಗೆ 7 ಮಂದಿ ಮಕ್ಕಳು. ಆ ಪೈಕಿ ಮೂವರು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಆರೋಪಿ ಅಸ್ಲಾಂ ಕಳ್ಳತನ ಮಾಡಿದ ಹಣ ವನ್ನು ಕುಟುಂಬಕ್ಕೂ ಸ್ವಲ್ಪ ಕೊಡುತ್ತಿದ್ದನಂತೆ. ಆರೋಪಿ ಹಗಲಿನ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಹಾಗೂ ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದನು. ರಾತ್ರಿಯಾಗುತ್ತಿದ್ದಂತೆ ಆ ಮನೆಗಳಲ್ಲಿ ಕೈಚಳಕ ತೋರಿಸಿ ಹಣ, ಆಭರಣಗಳನ್ನು ಕಳ್ಳತನ ಮಾಡಿಕೊಂಡು ಬೇರೆ ಜಿಲ್ಲೆಗಳಿಗೆ ಪರಾರಿಯಾಗುತ್ತಿದ್ದನು.
ತದನಂತರದಲ್ಲಿ ಆ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಮತ್ತೆ ವಾಪಸ್ ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದನು. ಹಾಗಾಗಿಯೇ ಆರೋಪಿ ಜಾಗ ಬದಲಿಸುತ್ತಿದ್ದರಿಂದ ಪೊಲೀಸರಿಗೆ ಆತನನ್ನು ಬಂಧಿಸುವುದು ಸವಾಲಾಗಿತ್ತು. ಆರೋಪಿಯು ಕಳ್ಳತನ ಮಾಡಿದ ಜಿಲ್ಲೆಗಳಿಗೆ ಒಂದು ವರ್ಷ ಸುಳಿಯುತ್ತಿರಲಿಲ್ಲ. ಆರೋಪಿಯ ಮತ್ತೊಂದು ವಿಶೇಷವೆಂದರೆ ಕಳ್ಳತನ ಮಾಡಿದ ನಂತರ ಪ್ರತಿ ಬಾರಿ ಅಜೀರ್ ದರ್ಗಾಕ್ಕೆ ಹೋಗಿ ಸ್ವಲ್ಪ ಹಣ, ಆಭರಣಗಳನ್ನು ಹುಂಡಿಗೆ ಹಾಕಿ ಪ್ರಾರ್ಥನೆ ಸಲ್ಲಿಸಿ ಉಳಿದ ಹಣದಲ್ಲಿ ಮೋಜು-ಮಸ್ತಿಗಾಗಿ ಗೋವಾಗೆ ಹೋಗುತ್ತಿದ್ದನಂತೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ಕಿಟಕಿಯಲ್ಲಿ ಕೈ ತೂರಿಸಿ ಮಹಿಳೆಯ ಸರ ಅಪಹರಣ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ಈತನ ವಿಚಾರಣೆ ವೇಳೆ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ. ಆರೋಪಿಯು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದನು. ಇದೀಗ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
