ಬೆಂಗಳೂರು,ಡಿ.10- ವಿಶ್ವದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಭದ್ರಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪದವಿಭೂಷಣ ಪ್ರಶಸ್ತಿ ಪುರಸ್ಕತ, ಮಾಜಿ ರಾಜ್ಯಪಾಲ, ಕೇಂದ್ರದ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (92) ಆವರು ತೀವ್ರ ಆನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.
ಮೃತರು ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರಾದ ಶಾಂಭವಿ, ಮಾಳವಿಕ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರನ್ನು ಬಿಟ್ಟು ಅಗಲಿದ್ದಾರೆ. ಮೃತರ ಗೌರವಾರ್ಥ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಣೆ ಮಾಡಿದೆ.ಮೃತರ ಅಂತ್ಯಕ್ರಿಯೆ ಬುಧವಾರ ಹುಟ್ಟರಾದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸಕಾಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಆಸ್ಪತ್ರೆಗೂ ದಾಖಲಾಗಿದ್ದರು. ಚೇತರಿಸಿಕೊಂಡಿದ್ದ ಅವರನ್ನು ಮನೆಗೆ ಕರೆ ತರಲಾಗಿತ್ತು. ಆದರೆ ಅನಾರೋಗ್ಯ ಕಾಡಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಒಂದು ತಿಂಗಳಿನಿಂದ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿತ್ತು. ಇದರಿಂದ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 2.30ರ ಹೊತ್ತಿಗೆ ವಿಧಿವಶರಾದರು.
ಸದಾಶಿವನಗರದಲ್ಲಿರುವ ಶಾಂಭವಿ ನಿವಾಸದಲ್ಲಿ ಇಂದು ದಿನಪೂರ್ತಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬುಧವಾರ ಬೆಳಗ್ಗೆ ಹುಟ್ಟೂರು ಸೋಮನಹಳ್ಳಿಗೆ ಕೃಷ್ಣ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ನಾಳೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಎಸ್.ಎಂ.ಕೆ ರಾಜಕೀಯ ಜೀವನ
ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಮಂಡ್ಯಕ್ಕೆ ಬಂದ ಎಸ್.ಎಂ.ಕೃಷ್ಣ ಅವರು 1962 ರಲ್ಲಿ ಪ್ರಥಮ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಮದ್ದೂರು ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ ಜೀವನದಲ್ಲಿ ಆರಂಭಿಸಿ ದೇಶ ಹಾಗು ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೆ ಉಳಿಯುವ ಸಾಧನೆ ಮಾಡಿದ್ದಾರೆ.
ನಂತರ 1967ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣ ಅವರು ಮದ್ದೂರು ಕ್ಷೇತ್ರದಲ್ಲಿ ಸೋತರು ಆದರೆ1968 ರ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರ್ಜರಿ ಗೆಲುವು ಪಡೆಯುವ ಮೂಲಕ ಮೊದಲ ಬಾರಿಗೆ ಸಂಸತ್ ಸದಸ್ಯನಾಗಿ ಆಯ್ಕೆಯಾದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ 1970 ರಲ್ಲಿ ಕೃಷ್ಣರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ 1971 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಂಡ್ಯದಿಂದ ಸ್ಪರ್ಧೆ ಮಾಡಿ ಸತತ ಎರಡನೇ ಬಾರಿಗೆ ಸಂಸತ್ ಸದಸ್ಯರಾದರು. ಬಳಿಕ 1972 ರಲ್ಲಿ ಎಂಪಿ ಸ್ಥಾನಕ್ಕೆ ರಾಜಕೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ಮರುಳಿ ಆಗಿನ ಸಿಎಂ ದೇವರಾಜ್ ಅರಸ್ ಅವರ ಸರ್ಕಾರದಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಬಳಿಕ ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಹೊಸ ಛಾಪು ಮೂಡಿಸಿದರು.
ನಂತರ 1980 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಎಸ್.ಎಂ.ಕೃಷ್ಣ ಅವರು ಸ್ಪರ್ಧೆ ಮಾಡಿ ಗೆಲುವು ಪಡೆಯುವ ಮೂಲಕ ಮೂರನೇ ಬಾರಿಗೆ ಎಂಪಿಯಾಗು ಆಗ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಕೇಂದ್ರ ಕೈಗಾರಿಕಾ ಹಾಗೂ ಹಣಕಾಸು ಖಾತೆಯ ಸಚಿವರಾಗಿ ಕೆಲಸ ಮಾಡಿದರು.
1982 ರಲ್ಲಿ ಭಾರತೀಯ ನಿಯೋಗದ ಸದಸ್ಯರಾಗಿ ಯುರೋಪ್, ಅಮೆರಿಕ, ಜಪಾನ್, ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ರಾಷ್ಟ್ರಗಳನ್ನು ಕೃಷ್ಣ ಅವರು ಪ್ರವಾಸ ಮಾಡಿದ್ದರು.ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ರಾಜಕೀಯ ಅಸ್ಥಿರತೆ ಉಂಟಾಗಿ ರಾಜೀವ್ ಗಾಂಧಿ ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಂಡರು.1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಕೃಷ್ಣ ರವರನ್ನು ಕೆ.ವಿ.ಶಂಕರೇಗೌಡರು ಸೋತ್ತಿದ್ದರು.
ಮುಂದಿನ 5 ವರ್ಷಗಳ ಕಾಲ ಕೇವಲ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. 1989ರ ಹೊತ್ತಿಗೆ ರಾಜ್ಯ ವಿಧಾನಸಭೆ ಚುನಾವಣೆ ಎದುರಾಯಿತು. ಪಕ್ಷದ ಅಣತಿಯಂತೆ ಸ್ಪರ್ಧಿಸಿ ಗೆದ್ದು ಶಾಸಕರಾದರು. 1992ರವರೆಗೂ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದರು. 1992ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರ ವಿರುದ್ಧ ಕ್ಲಾಸಿಕ್ ಕಂಪ್ಯೂಟರ್ ಹಗರಣಕೇಳಿ ಬಂದಾಗ ಅವರ ಸ್ಥಾನದಲ್ಲಿ ಎಂ. ವೀರಪ್ಪ ಮೊಯ್ಲಿ ಅವರನ್ನು ಕೂರಿಸಲಾಯಿತು. ಆಗ ಕೃಷ್ಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಯೋಗ ಕೂಡಿ ಬಂದಿದ್ದರೂ ಪರಿಸ್ಥಿತಿ ಸರಿಯಾಗಿಲ್ಲದ್ದರಿಂದ ಅದರಿಂದ ಹಿಂದೆ ಸರಿಯಬೇಕಾಯಿತು.
1994ರಲ್ಲಿ ಮದ್ದೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತರು. ಎರಡು ವರ್ಷಗಳ ಅಂತರದಲ್ಲಿ ಅಂದರೆ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಹಿರಿಯರ ಮನೆ ಸೇರಿದರು. 1998ರ ಹೊತ್ತಿಗೆ ಸೋನಿಯಾ ಗಾಂಧಿ ಕಾಂಗ್ರೆಸ್ ನೇತೃತ್ವ ವಹಿಸಿಕೊಂಡರು. ಕೃಷ್ಣ ಅವರ ರಾಜಕೀಯ ಮುತ್ಸದ್ಧಿತನ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಮನೋಭಾವನೆ ಅರಿತ ಸೋನಿಯಾ 1999ರಲ್ಲಿ ಕೆಪಿಸಿಸಿ ಅಧ್ಯಕ್ಷ ಹೊಣೆಗಾರಿಕೆ ವಹಿಸಿದರು. ಅಲ್ಲದೇ ಅದೇ ಸಂದರ್ಭದಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಹುದ್ದೆಗೇರಿದರು. ಇದೇ ಸಂದರ್ಭದಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಳ್ಳಾರಿ ಹಾಗೂ ಅಮೇಥಿಯಲ್ಲಿ ಸ್ಪರ್ಧಿಸಿದ್ದ ಸೋನಿಯಾ ಎರಡೂ ಕಡೆ ಗೆಲವು ಸಾಧಿಸಿದ್ದು ಈಗ ಇತಿಹಾಸ.
ಆಗರ್ಭ ಶ್ರೀಮಂತ:
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932ರ ಮೇ 1 ರಂದು ಜನಿಸಿದರು. ಹುಟ್ಟುತ್ತಲೇ ಕೃಷ್ಣ ಅವರು ಆಗರ್ಭ ಶ್ರೀಮಂತರು. ಅವರ ತಂದೆ ಮಲ್ಲಯ್ಯ ಅವರು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 40 ವರ್ಷಕ್ಕೂ ಅಧಿಕ ಕಾಲ ಪ್ರಜಾಪ್ರತಿನಿಧಿ ಸಭೆ ಹಾಗೂ ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ, ಮಂಡ್ಯ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ, ಮೈಸೂರು ವಿವಿ ಸೆನೆಟ್ ಸದಸ್ಯರಾಗಿ, ರಾಜ್ಯ ಆರ್ಥಿಕ ಸುಧಾರಣಾ ಸಮಿತಿ ಸದಸ್ಯರಾಗಿ, ರಾಷ್ಟ್ರ ಹಾಗೂ ರಾಜ್ಯ ಒಕ್ಕಲಿಗ ಸಂಘದ ಮಹಾಕಾರ್ಯದರ್ಶಿಯಾಗಿ ಮಲ್ಲಯ್ಯ ಅವರು ಸೇವೆ ಸಲ್ಲಿಸಿದ್ದಾರೆ.
ಗಾಂಧಿಗೆ ಮಾಲೆ :
ಕೃಷ್ಣ ಅವರ ತಂದೆ-ತಾಯಿಗೆ ಒಟ್ಟು 10 ಮಕ್ಕಳು. ಕೃಷ್ಣ ಅವರು 6 ನೇ ಮಗ. ಇವರ ಹಿಂದೆ ಐದು ಹೆಣ್ಣು ಮಕ್ಕಳು ಹಾಗೂ ಇವರ ಬಳಿಕ ಒಂದು ಗಂಡು ಹಾಗೂ ಮೂರು ಮಂದಿ ಹೆಣ್ಣು ಮಕ್ಕಳು ಜನಿಸಿದ್ದರು. ಕೃಷ್ಣ ಅವರ ಜನನಕ್ಕೂ ಮುನ್ನ ಎರಡು ಗಂಡು ಮಕ್ಕಳು ಸಾವನ್ನಪ್ಪಿದ್ದವು. ಬಳಿಕ ಕೃಷ್ಣ ಅವರ ತಂದೆ ತಾಯಿ ಮಲೆಮಹದೇಶ್ವರನಿಗೆ ಹರಕೆ ಹೊತ್ತ ಫಲವಾಗಿ ಎಸ್.ಎಂ.ಕೃಷ್ಣ ಅವರ ಜನನವಾಗಿ ಆರೋಗ್ಯವಾಗಿ ಬೆಳೆದು ನಿಂತರು. 1934 ರಂದು ಮಹಾತ ಗಾಂಧೀಜಿ ಅವರು ಸೋಮನಹಳ್ಳಿಗೆ ಬಂದ ವೇಳೆ ಮೂರು ವರ್ಷದ ಪುಟ್ಟ ಕೃಷ್ಣ ಅವರು ಗಾಂಧೀಜಿ ಅವರಿಗೆ ಹೂವಿನ ಮಾಲೆ ಹಾಕಿದ್ದರು.
ಶಿಸ್ತುಬದ್ಧ ಜೀವನ :
1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಎಸ್.ಎಂ.ಕೃಷ್ಣ ಅವರು ಮುನ್ನಡೆಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು.ಈ ವೇಳೆ ಮದ್ದೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಈ ಮೂಲಕ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮೊದಲ ನಾಯಕ ಸಿಎಂ ಆಗಿರುವ ಹೆಗ್ಗಳಿಕೆಗೆ ಕೃಷ್ಣ ಅವರು ಪಾತ್ರರಾಗಿದ್ದರು.
ತಮ ಶಿಸ್ತು ಬದ್ಧ ಜೀವನದ ಮೂಲಕವೇ ಗಮನ ಸೆಳೆದಿದ್ದ ಕೃಷ್ಣ ಅವರು ಸದಾ ನಗುಮುಖದ ಮೂಲಕ, ತಮದೇ ಆದ ಶೈಲಿಯ ರಾಜಕಾರಣದ ಮೂಲಕ ಗಮನ ಸೆಳೆದಿದ್ದರು. ಎಸ್.ಎಂ.ಕೃಷ್ಣ ಅವರು ಶಾಸಕ, ಸಂಸದ, ಸಚಿವ, ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಕೇಂದ್ರದಲ್ಲಿ ಸಚಿವ, ಮಹಾರಾಷ್ಟ್ರ ರಾಜ್ಯಪಾಲರೂ ಆಗಿದ್ದರು. ವರ್ಣಮಯ ವ್ಯಕ್ತಿತ್ವದ ರಾಜಕಾರಣಿ. ಎಸ್.ಎಂ.ಕೃಷ್ಣ ಅವರ ಜೀವನಗಾಥೆ ನೆಲದ ಸಿರಿ ಪುಸ್ತಕ ಬಿಡುಗಡೆಯಾಗಿತ್ತು.
ಸಿಲಿಕಾನ್ ಸಿಟಿಯ ಹರಿಕಾರ :
ಎಸ್.ಎಂ.ಕೃಷ್ಣ ಅವರ ಜೀವನಚರಿತ್ರೆ ಚಿತ್ರ ದೀಪ ಸಾಲು, ನೆನಪುಗಳ ಸಂಕಲನ ಸತಿವಾಹಿನಿ, ಜೀವನಚರಿತ್ರೆ ಕೃಷ್ಣಪಥ, ಚಿಂತನೆಗಳ ಸಂಕಲನ ಭವಿಷ್ರ್ಶನ, ಇಂಗ್ಲಿಷ್ ಕೃತಿಗಳಾದ ಡೌನ್ ಮೆಮೊರಿ ಲೇನ್ ಹಾಗೂ ಸ್ಟೇಟ್ಸನ್ ಎಸ್.ಎಂ.ಕೃಷ್ಣ ಕೃತಿಗಳು ನಾಲ್ಕು ವರ್ಷದ ಹಿಂದೆ ಬಿಡುಗಡೆ ಕಂಡಿದ್ದವು.
ಮದ್ದೂರು ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಎಸ್.ಎಂ.ಕೃಷ್ಣ ಕಾಂಗ್ರೆಸ್‌ನಲ್ಲಿ ಉನ್ನತ ಹ್ದುೆಗಳನ್ನು ಅನುಭವಿಸಿದವರು. ಕರ್ನಾಟಕದ ಮುಖ್ಯಮಂತ್ರಿಯಾಗಿ ಬೆಂಗಳೂರಿನ ಅಭಿವೃದ್ಧಿಗೂ ಕೊಡುಗೆ ನೀಡಿದ್ದವರು. ಕೇಂದ್ರದಲ್ಲೂ ಕೈಗಾರಿಕಾ ಸಚಿವ, ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದವರು. ಬಹುತೇಕ ತಮ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಲ್ಲಿಯೇ ಕಳೆದ ಕೃಷ್ಣ ಅವರು 2017ರಲ್ಲಿ ಬಿಜೆಪಿಗೆ ಸೇರಿದ್ದರು. ಅಲ್ಲಿಯೇ ಇದ್ದರು.
ಹಲವಾರು ಸಮಸ್ಯೆಗಳ ನಡುವೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಇಂದಿಗೂ ಸರಿಸಬೇಕಾಗಿದೆ.
ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ :
ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ಹೊರತು ಪಡಿಸಿ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಸಭ್ಯ ಉಡುಗೆ ಎಂದರೆ ಕೃಷ್ಣ ಅವರಿಗೆ ತುಂಬಾ ಪ್ರೀತಿ. ಖಾದಿ, ಉಣ್ಣೆ, ರೇಷೆ ರೀತಿಯ ವಸ್ತುಗಳನ್ನು ಧರಿಸುತ್ತಿದ್ದರು. ಅದರಲ್ಲಿಯೂ ಕೋಟು ಹಾಗೂ ಜುಬ್ಬಾ ಕೃಷ್ಣ ಅವರ ನೆಚ್ಚಿನ ಉಡುಗೆಗಳು. ಬಾಲ್ಯದಲ್ಲಿ ಕೃಷ್ಣ ಅವರು ಬಾಲ್ಯದಲ್ಲಿ ಫುಟ್ಬಾಲ್, ವಾಲಿಬಾಲ್ ಅನ್ನು ಹೆಚ್ಚಾಗಿ ಆಡುತ್ತಿದ್ದರು.
ಬಳಿಕ ಮಹಾರಾಜ ಕಾಲೇಜು ಸೇರಿದ ಬಳಿಕ ಟೆನ್ನಿಸ್ ಕಡೆಗೆ ಹೆಚ್ಚು ಒತ್ತನ್ನು ಕೃಷ್ಣ ಅವರು ನೀಡಿದ್ದರು. ತಮ ಬಿಡುವಿನ ವೇಳೆಯಲ್ಲಿ ಟೆನ್ನಿಸ್ ಆಡುತ್ತಿದ್ದರು. ರಾಜಕೀಯ ರಂಗಕ್ಕೆ ಧುಮುಕಿದ ವೇಳೆಯೂ ಬಿಡುವಿನಲ್ಲಿ ಟೆನ್ನಿಸ್ ಆಡುವುದು ಹಾಗೂ ನೋಡುವುದನ್ನು ಮಾಡುತ್ತ ಇದ್ದರು.
ಇನ್ನೂ ಊಟದ ವಿಚಾರಕ್ಕೆ ಬಂದ್ರೆ ಸಿಹಿ ಪದಾರ್ಥ ಇಷ್ಟ ಪಡುತ್ತಿದ್ದರು, ಅಲ್ಲದೇ ಮಾಂಸಹಾರದಲ್ಲಿ ನಾಟಿ ಶೈಲಿಯನ್ನು ಇಷ್ಟಪಟ್ಟು ಸೇವನೆ ಮಾಡ್ತಾ ಇದ್ದರು. ವಿದೇಶದಲ್ಲಿ ಕೃಷ್ಣ ಅವರು ವ್ಯಾಸಂಗ ಮಾಡಿದ ಕಾರಣ ವಿದೇಶಿ ತಿನಿಸುಗಳನ್ನು ಸಹ ತಿನ್ನುತ್ತಿದ್ದರು.
ಜಾನ್.ಎಫ್.ಕೆನಡಿ ಪ್ರಭಾವ :
ಬೆಂಗಳೂರು, ಡಿ.10- ಎಸ್.ಎಂ.ಕೃಷ್ಣ ಅವರು 1937 ರಂದು ಸೋಮನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮದ್ದೂರಿನಲ್ಲಿ ವಿದ್ಯಾರಂಭ ಮಾಡಿದರು. ಬಳಿಕ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ಮಹಾಜನ ಮಾಧ್ಯಮಿಕ ಶಾಲೆಯಲ್ಲಿ ಮೂರನೇ ತರಗತಿಯಿಂದ ಓದು ಮುಂದುವರಿಸಿದರು. 1948 ರಲ್ಲಿ ಮಹಾಜನ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದರು.
ಬಳಿಕ ಮೈಸೂರಿನ ಫಸ್ಟ್ ಗ್ರೇಡ್ (ಇಂದಿನ ಯುವರಾಜ ಕಾಲೇಜು) ತರಗತಿಗೆ ಸೇರಿದರು. 1950 ರಂದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ವ್ಯಾಸಂಗಕ್ಕೆ ಸೇರ್ಪಡೆಯಾದರು. 1955 ರಲ್ಲಿ ಬೆಂಗಳೂರಿನ ಲಾ ಕಾಲೇಜಿನಲ್ಲಿ ಬಿ.ಎಲ್ ಪದವಿ ಪಡೆದರು.
ಬಳಿಕ ಆಗಿನ ಕಾಲದ ಹೆಸರಾಂತ ವಕೀಲರಾದ ಗಣೇಶರಾಯರ ಬಳಿ ಜೂನಿರ್ಯ ಆಗಿ ಸೇರಿದ್ದರು. 1958 ರಂದು ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಗೆ ತೆರಳುತ್ತಾರೆ. ಅಲ್ಲಿನ ಟೆಕ್ಸಾಸ್‌ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ಬಳಿಕ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿಗೆ ಸೇರಿದರು ಸಹ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಇದೇ ವೇಳೆ ಜಾನ್.ಎಫ್.ಕೆನಡಿ ಅವರ ಪ್ರಭಾವಕ್ಕೆ ಸಹ ಕೃಷ್ಣ ಅವರು ಮಣಿದರು. ಆ ವೇಳೆ ಕೆನಡಿ ಅವರು ಅಮೇರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷತೆಗೆ ಸ್ಪರ್ಧಿಸಿದ್ದರು. ಆಗ ಕೃಷ್ಣ ಅವರು ಕೆನಡಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದು ಕೃಷ್ಣ ಅವರು ರಾಜಕೀಯಕ್ಕೆ ಕಾಲಿಡುವಂತೆ ಪ್ರೇರೇಪಣೆ ಮಾಡಿದೆ. 1961 ರಂದು ಕೃಷ್ಣ ಅವರು ಅಮೆರಕಾದಿಂದ ಉನ್ನತ ವ್ಯಾಸಂಗ ಮುಗಿಸಿ ವಾಪಸ್ಸು ಬಂದರು.



















