Sunday, November 10, 2024
Homeರಾಜಕೀಯ | Politicsಸಿಎಂ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ, ಈಗ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಅನಗತ್ಯ :...

ಸಿಎಂ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ, ಈಗ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಅನಗತ್ಯ : ಪರಮೇಶ್ವರ್‌

The post of CM is not vacant as of now, there is no need to discuss about the next Chief Minister: Parameshwar

ಬೆಂಗಳೂರು,ಸೆ.9- ಮುಖ್ಯಮಂತ್ರಿ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ. ಹೀಗಾಗಿ ಮುಂದಿನ ಮುಖ್ಯಮಂತ್ರಿಯ ಕುರಿತು ಚರ್ಚೆ ಮಾಡುವ ಅಗತ್ಯವೂ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಹಂತದಲ್ಲಿರುವುದು ನಿಜ. ಅಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲದಕ್ಕೂ ಮೊದಲೇ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಮಾಡುವ ಅಗತ್ಯ ಸದ್ಯಕ್ಕಂತೂ ನನಗೆ ಕಾಣಿಸುತ್ತಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ನೀಡಿರುವ ಅಭಿಯೋಜನೆಗೆ ಪೂರ್ವಾನುಮತಿಗೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಅದರ ವಾದ ಇಂದು ಮುಂದುವರೆಯಲಿದೆ. ಅಡ್ವೊಕೇಟ್‌ ಜನರಲ್‌ ಹಾಗೂ ಇತರ ವಕೀಲರು ತಮ ವಾದವನ್ನು ಮುಂದುವರೆಸಲಿದ್ದಾರೆ. ಇತ್ತೀಚಿನ ವಿಚಾರಣೆಯಲ್ಲಿ ನ್ಯಾಯಾಧೀಶರು 12ನೇ ತಾರೀಕಿನೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದ್ದಾರೆ ಎಂದರು.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಅವರ ಪಕ್ಷದಲ್ಲಿರುವ ಭಿನ್ನಮತಗಳನ್ನು ಮೊದಲು ನೋಡಿಕೊಳ್ಳಲಿ, ನಮ ಪಕ್ಷದ ವಿಚಾರವಾಗಿ ಅವರೇಕೆ ತಲೆ ಕೆಡಿಸಿಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇತ್ತೀಚೆಗೆ ಎತ್ತಿನಹೊಳೆ ಯೋಜನೆ ಉದ್ಘಾಟನೆಯ ದಿನ ನಾನು ಮತ್ತು ಸಚಿವ ಎಂ.ಬಿ.ಪಾಟೀಲ್‌ ಹಾಸನಕ್ಕೆ ಭೇಟಿ ನೀಡಬೇಕಿತ್ತು. ಇಬ್ಬರೂ ಜೊತೆಯಲ್ಲಿ ತೆರಳುವ ಕುರಿತು ಮಾತನಾಡಿಕೊಂಡಿದ್ದೆವು. ನಮ ಮನೆಗೆ ಉಪಹಾರಕ್ಕೆ ಬನ್ನಿ ಎಂದು ಎಂ.ಬಿ.ಪಾಟೀಲ್‌ ಆಹ್ವಾನ ನೀಡಿದ್ದರು. ಹೀಗಾಗಿ ನಾನು, ಅವರು ತಿಂಡಿ ತಿಂದು ಮುಖ್ಯಮಂತ್ರಿಯವರು ಮನೆಬಿಟ್ಟ ತಕ್ಷಣವೇ ನಾವೂ ಜೊತೆಯಲ್ಲಿಯೇ ಹೋಗಿದ್ದೇವೆ. ಅದರಲ್ಲಿ ರಾಜಕೀಯ ವಿಚಾರಗಳೇನೂ ಇಲ್ಲ. ಅನಗತ್ಯವಾಗಿ ಇಂತಹುದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

╰┈➤ Please Follow EE SANJE Whatsapp Channel for more updates

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಟುಂಬ ಸಮೇತರಾಗಿ ಅಮೆರಿಕಾಕ್ಕೆ ಖಾಸಗಿ ಪ್ರವಾಸ ತೆರಳಿದ್ದಾರೆ. ಅದು ಸರ್ಕಾರದಿಂದ ಪ್ರಾಯೋಜಿತವಾದ ಪ್ರವಾಸವಲ್ಲ. ಅವರ ಪ್ರವಾಸದ ಬಗ್ಗೆ ಕಾಂಗ್ರೆಸ್‌‍ ಸಭೆಯಲ್ಲೂ ಮಾಹಿತಿ ನೀಡಿದ್ದರು ಎಂದು ಹೇಳಿದರು.

ಮುಡಾ ಪ್ರಕರಣದಿಂದ ರಾಜ್ಯಸರ್ಕಾರದ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಾ ಸಚಿವರೂ ಆಯಾ ಇಲಾಖೆಗಳ ಕಾರ್ಯಕಲಾಪಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಯವರು ತಮ ಪಾಲಿನ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಇರುವುದರಿಂದ ಮುಖ್ಯಮಂತ್ರಿಯವರು ತಮ ಕಲಾಪಗಳನ್ನು ನಿಲ್ಲಿಸಿರಬಹುದು. ಉಳಿದಂತೆ ಎಲ್ಲಾ ಆಡಳಿತ ವ್ಯವಸ್ಥೆ ಮುಂದುವರೆದಿದೆ ಎಂದರು.

ಕಲಬುರಗಿಯಲ್ಲಿ ಕೃಷಿ ಇಲಾಖೆಯ ಅಧಿಕಾರಿಯೊಬ್ಬರ ಆತಹತ್ಯೆ ಯತ್ನಕ್ಕೂ ಮುನ್ನ ಬರೆದಿರುವ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು. ವರ್ಗಾವಣೆಗೆ ಯಾರು ಹಣ ಕೇಳುತ್ತಿದ್ದಾರೆ ಎಂಬ ಕುರಿತು ವಿಚಾರಣೆಯಾಗಲಿದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಯ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಪರಿಸರದ ವಿಚಾರ ಬಂದಾಗ ಆ ಕುರಿತು ಕಾಳಜಿ ವಹಿಸಲಾಗುತ್ತದೆ. ರಾಜ್ಯಸರ್ಕಾರದ ಅಧಿಕಾರಿಗಳು ಸೂಕ್ತ ಉತ್ತರವನ್ನು ನೀಡಲಿದ್ದಾರೆ. ಪರಿಸರ ನಾಶ ಮಾಡದೇ ಈವರೆಗೂ ಕೆಲಸ ನಿರ್ವಹಿಸಲಾಗಿದೆ ಎಂದರು.

ನಟ ದರ್ಶನ್‌ ಮತ್ತು ಅವರ ಸಹ ಖೈದಿಗಳು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಯಾವ ತೀರ್ಪು ನೀಡುತ್ತದೆ ಎಂಬುದನ್ನು ಕಾದುನೋಡುತ್ತೇವೆ ಎಂದು ಹೇಳಿದರು.

ಯುವಕಾಂಗ್ರೆಸ್‌‍ನ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಸಚಿವರು, ಶಾಸಕರ ಮಕ್ಕಳು ಸಮರ್ಥವಾಗಿದ್ದರೆ ಆಯ್ಕೆಯಾಗುತ್ತಾರೆ. ಇಲ್ಲವಾದರೆ ಕಾರ್ಯಕರ್ತರು ಮನೆಗೆ ಕಳುಹಿಸುತ್ತಾರೆ. ಅರ್ಜಿ ಹಾಕಿದವರು ಸಚಿವರ ಮಕ್ಕಳು ಎಂಬ ಕಾರಣಕ್ಕೆ ಆಯ್ಕೆಯಾಗುವುದಿಲ್ಲ ಎಂದರು.

RELATED ARTICLES

Latest News