ಬೆಳಗಾವಿ,ಡಿ.17– ರಾಜ್ಯ ಸರ್ಕಾರ ಮೆಡಿಕಲ್ ಮಾಫಿಯಾದ ಕಪಿ ಮುಷ್ಠಿಯಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿಂದು ಆರೋಪಿಸಿದರು. ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ಅವರು, ಕಳಪೆ ಗುಣಮಟ್ಟದ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಇಡಲಾಗುತ್ತಿದೆ. ಶೌಚಾಲಯವಿಲ್ಲ, ಸಾಕಷ್ಟು ವೈದ್ಯರಿಲ್ಲ.
ಡ್ರಗ್ ಮಾಫಿಯಾ ಹಿಡಿತದಲ್ಲಿ ಸರ್ಕಾರವಿದೆ. ಅವಧಿ ಮುಗಿದ ಔಷಧಿ ಸೇವಿಸುವ ಪರಿಸ್ಥಿತಿ ಇದೆ. ನೂರಾರು ಜನ ಸಾಯುತ್ತಿದ್ದಾರೆ. ಬಳ್ಳಾರಿ, ಬೆಳಗಾವಿಯಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಾಣಂತಿಯರ ಸಾವು ತಪ್ಪಿಸಿ ಬದುಕುವಂಥ ಗ್ಯಾರಂಟಿ ನೀಡಿ. ಬಹಳಷ್ಟು ಮಕ್ಕಳು ಕೂಡ ಮೃತಪಟ್ಟಿದ್ದಾರೆ. ಬಾಣಂತಿಯರ ಸಾವಿಗೆ ನ್ಯಾಯ ಬೇಕಲ್ಲವೆ? ಇಂದೇ ಈ ವಿಚಾರದ ಚರ್ಚೆಗೆ ಅವಕಾಶ ಕೊಡಿ ಇದು ಅತ್ಯಂತ ಮಹತ್ವದ ವಿಚಾರ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುತ್ತಿರುವ ಔಷಧಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಔಷಧಿ ಗುಣಮಟ್ಟ ಪರೀಕ್ಷಿಸುವ ವೈದ್ಯಕೀಯ ಸರಬರಾಜು ನಿಗಮದಲ್ಲಿನ ಕಾರ್ಯ ವಿಧಾನದ ಬಗ್ಗೆ ಪ್ರಶ್ನೆ ಮೂಡಿದೆ. ಬಡವರು, ಸಾರ್ವಜನಿಕರು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಅವಲಂಬಿಸುವ ಅನಿವಾರ್ಯತೆ ಇದೆ. 6 ತಿಂಗಳ ಹಿಂದೆಯೇ ಬಳಸಲಾಗದ ಔಷಧಿಗಳನ್ನು ಬಳಸಲಾಗುತ್ತಿದೆ.
ಬೆಂಗಳೂರಿನ ಜಯನಗರ ಕ್ಷೇತ್ರದ ಕ್ಯಾನ್ಸರ್ ಪೀಡಿತ ರೋಗಿಗಳು ತಾವೇ ಔಷಧಿ ತೆಗೆದುಕೊಳ್ಳುವ, ಚುಚ್ಚುಮದ್ದು ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ಆರೋಗ್ಯ ಸೇವೆಯನ್ನು ಸರ್ಕಾರ ಕಡೆಗಣಿಸಿದೆ. ಜನರಿಗೆ ಆರೋಗ್ಯ ಗ್ಯಾರಂಟಿಯೂ ಬೇಕು ಎಂದು ಆಗ್ರಹಿಸಿದರು. ಇತರ ಬಿಜೆಪಿ ಶಾಸಕರು ದನಿಗೂಡಿಸಿ ಮಾತನಾಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ನಿಲುವಳಿ ಸೂಚನೆ ಬದಲಾಗಿ ನಿಯಮ 69ರಡಿ ಅರ್ಧಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಈಗ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಆರಂಭಿಸೋಣ ಎಂದು ಈ ವಿಚಾರದ ಚರ್ಚೆಗೆ ತೆರೆ ಎಳೆದರು.