Friday, May 3, 2024
Homeರಾಜ್ಯಮೇ ತಿಂಗಳಲ್ಲಿ ಮತ್ತಷ್ಟು ಏರಲಿದೆ ತಾಪಮಾನ, ಇರಲಿ ಎಚ್ಚರ

ಮೇ ತಿಂಗಳಲ್ಲಿ ಮತ್ತಷ್ಟು ಏರಲಿದೆ ತಾಪಮಾನ, ಇರಲಿ ಎಚ್ಚರ

ಬೆಂಗಳೂರು,ಏ.8- ಭಾರತ ಹವಾಮಾನ ಇಲಾಖೆಯು ಮುನ್ಸೂಚನೆ ಅನ್ವಯ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2 ರಿಂದ 3 ಡಿಗ್ರಿ ಸೆ. ನಷ್ಟು ಅಧಿಕ ತಾಪಮಾನ ದಾಖಲಾಗುತ್ತಿದೆ. ಇದು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ರಾಜ್ಯದಲ್ಲಿ ಏಪ್ರಿಲ್, ಮೇ ಅವಧಿಯಲ್ಲಿ ಬಿಸಿ ವಾತಾವರಣವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಿರಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದೆ. ರಾಜ್ಯದಾದ್ಯಂತ ಸಾಮಾನ್ಯ ಶಾಖದ ಅಲೆಗಳ ದಿನಗಳನ್ನು 2-14 ದಿನಗಳು ಮೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಅತೀ ಹೆಚ್ಚು ತಾಪಮಾನದಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾಮಾನ್ಯ ಸೂಚನೆಗಳನ್ನು ನೀಡಲಾಗಿದೆ.

ಸಾಧ್ಯವಾದಷ್ಟು ಮಟ್ಟಿಗೆ ಮಧ್ಯಾಹ್ನದ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು, ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುವುದು, ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆಗಳನ್ನು ಧರಿಸುವುದು, ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ / ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸುವುದು, ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವುದು, ಪ್ರಯಾಣಿಸುವಾಗ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು, ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್ ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳ ಸೇವನೆ ಮಾಡಬಾರದು ಹಾಗೂ ಬಿಸಿ ಆಹಾರವನ್ನು ಸೇವಿಸುವುದು ಸೇರಿದಂತೆ ಹಲವು ಸಲಹೆಗಳನ್ನು ಆರೋಗ್ಯ ಇಲಾಖೆ ನೀಡಿದೆ.

ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಹಣ್ಣುಗಳನ್ನು ಬಳಸುವುದು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು.

ಅತೀ ಹೆಚ್ಚು ತಾಪಮಾನ ಸಮಯದಲ್ಲಿ ಬೆಂಕಿಯ ತಡೆಗಟ್ಟುವಿಕೆ:

ಆಸ್ಪತ್ರೆಗಳು, ಕೈಗಾರಿಕೆಗಳು, ಜನಸಂದಣಿ ಸ್ಥಳಗಳು ಇತ್ಯಾದಿಗಳಲ್ಲಿ ಅಗ್ನಿ ಸುರಕ್ಷತೆಯ ವಿವಿಧ ಅಂಶಗಳ ಮೇಲೆ ಆಗಾಗ್ಗೆ ತಪಾಸಣೆ ಕೈಗೊಳ್ಳುವುದು. ಅಗ್ನಿ ಸುರಕ್ಷತೆಗೆ ತರಬೇತಿಗಳನ್ನು ಕೈಗೊಳ್ಳುವುದು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್ ಕಡ್ಡಾಯವಾಗಿ ನಡೆಸುವುದು.

ಅತೀ ಹೆಚ್ಚು ತಾಪಮಾನ ತಡೆಗಟ್ಟುವ ಕುರಿತಂತೆ ಇಲಾಖಾವಾರು ಕರ್ತವ್ಯ / ಜವಾಬ್ದಾರಿಗಳನ್ನು ಅತೀ ಹೆಚ್ಚು, ತಾಪಮಾನದ ಕ್ರಿಯಾ ಯೋಜನೆಗಳಲ್ಲಿ ನಿಗದಿಪಡಿಸಲಾಗಿರುತ್ತದೆ. ಕ್ರಿಯಾ ಯೋಜನೆಗಳಡಿಯಲ್ಲಿ ಇಲಾಖೆಗಳಿಗೆ ನಿಗದಿಪಡಿಸಿರುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಅಧಿಕೃತ ಪ್ರಕಟಣೆ ತಿಳಿಸಿದೆ.

RELATED ARTICLES

Latest News