ಮೈಸೂರು,ಸೆ.28– ಕೇಂದ್ರ ಸಚಿವ ಕುಮಾರಸ್ವಾಮಿಯವರು ನೀಡುವ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡಬೇಕು ಎಂಬ ನಿಯಮ ಇಲ್ಲ. ಹೀಗಾಗಿ ರಾಜ್ಯಪಾಲರ ವಿಚಾರವಾಗಿ ಅವರು ಹೇಳಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಎಲ್ಲ ಹೇಳಿಕೆಗಳೂ ಸುಳ್ಳಿನಿಂದ ಕೂಡಿದ್ದು, ಅವರ ಎಲ್ಲ ಮಾತಿಗೆ ಪ್ರತಿಕ್ರಿಯೆ ನೀಡುವುದು ಅವಶ್ಯಕತೆಯಿಲ್ಲ . ಉತ್ತರ ನೀಡಲೇಬೇಕು ಎಂಬ ಯಾವ ನಿಯಮವೂ ಇಲ್ಲ. ಹೀಗಾಗಿ ಯಾವುದೇ ಪ್ರತಿಕ್ರಿಯೆಗಳನ್ನು ನಾನು ನೀಡುವುದಿಲ್ಲ ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಪಾಲರನ್ನು ಪ್ರಶಂಸಿಸಿ ಮಾತನಾಡಿದ್ದರು. ಈಗ ಟೀಕಿಸುತ್ತಿದ್ದಾರೆ. ಸಿದ್ದರಾಮಯ್ಯನವರು ದ್ವಂದ್ವ ನಿಲುವು ಎಂದು ಕುಮಾರಸ್ವಾಮಿ ಹೇಳಿದರು. ಅದಕ್ಕೆ ಸಿದ್ದರಾಮಯ್ಯ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಪ್ರದಾನಿ ಮೋದಿಯವರು ಹರಿಯಾಣದ ಪ್ರಚಾರ ಭಾಷಣದಲ್ಲಿ ರಾಜ್ಯದ ಮುಡಾ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಯಿಸಿ, ಬಿಜೆಪಿ ಪಕ್ಷದಲ್ಲಿಯೇ ಬಹಳ ಭ್ರಷ್ಟಾಚಾರಿಗಳಿದ್ದು, ಪ್ರಧಾನಿ ಮೋದಿಯವರು ಅವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಿಯವರು ಹಿಡನ್‌್ಸಬರ್ಗ್ ಹಗರಣದ ಬಗ್ಗೆ ಏಕೆ ಹೇಳಿಕೆ ನೀಡುವುದಿಲ್ಲ. ಮಣಿಪುರದ ಹಿಂಸೆಯ ಬಗ್ಗೆ ಮಾತನಾಡುವುದೂ ಇಲ್ಲ , ಅಲ್ಲಿಗೆ ಭೇಟಿಯೂ ನೀಡಲಿಲ್ಲವೇಕೆ? ಎಂದು ಪ್ರಶ್ನಿಸಿದ್ದಲ್ಲದೆ, ರಾಹುಲ್ಗಾಂಧಿಯವರು ಪ್ರಸ್ತಾಪಿಸಿದ ಹಲವು ವಿಚಾರಗಳಿಗೆ ಮೋದಿಯವರು ಉತ್ತರವನ್ನೇ ನೀಡುತ್ತಿಲ್ಲ ಎಂದರು.
ಶಾಸಕ ಎ.ಎಸ್.ಪೊನ್ನಣ್ಣನವರು ನನ್ನ ಕಾನೂನು ಸಲಹೆಗಾರರಾಗಿರುವುದರಿಂದ, ಪ್ರತಿದಿನ ಅವರಿಂದ ಕಾನೂನಿನ ಚರ್ಚೆ ನಡೆಸುತ್ತೇನೆ . ಅದರಲ್ಲಿ ತಪ್ಪೇನಿದೆ ಎಂದು ತಿರುಗೇಟು ನೀಡಿದರು.