ಬೆಂಗಳೂರು,ಸೆ.23– ಐಷಾರಾಮಿ ವಿಲ್ಲಾಗಳಲ್ಲಿ ಕಳ್ಳತನ ಮಾಡುತ್ತಿದ್ದ ತ್ರಿಪುರಾ ರಾಜ್ಯದ ಆರೋಪಿಯೊಬ್ಬನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ವಾಚ್‌ಗಳು, ಅಮೆರಿಕನ್ ಡಾಲರ್, 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ನಾರಾಯಣಪುರದ ವಿಲ್ಲಾವೊಂದರ ನಿವಾಸಿಯೊಬ್ಬರು ಮುಂಬಾಗಿಲು ಲಾಕ್ ಮಾಡಿ ಮಹಡಿಯ ಮೇಲಿರುವ ಬಾಗಿಲ ಚಿಲಕ ಹಾಕದೇ ವಾಚ್, ಮೊಬೈಲ್ ಹಾಗೂ ಪರ್ಸ್ ಅನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಮಲಗಿದ್ದರು.ಬೆಳಗಾಗುವಷ್ಟರಲ್ಲಿ ಅವೆಲ್ಲಾ ವಸ್ತುಗಳು ಮಾಯವಾಗಿದ್ದವು. ಪರ್ಸ್‌ನಲ್ಲಿ 1900 ಅಮೆರಿಕನ್ ಡಾಲರ್ ಇರುವುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಬ್ಬಿ ಕ್ರಾಸ್ ಬಳಿ ತ್ರಿಪುರಾ ರಾಜ್ಯದ ವ್ಯಕ್ತಿಯನ್ನು ಬಂಧಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಚ್, ಮೊಬೈಲ್ ಹಾಗೂ ಅಮೆರಿಕನ್ ಡಾಲರ್ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಗರದ ವಿವಿಧ ಕಡೆಗಳಲ್ಲಿರುವ ಐಷಾರಾಮಿ ವಿಲ್ಲಾಗಳಲ್ಲಿ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.
ಈತನ ಮಾಹಿತಿ ಮೇರೆಗೆ ಹನುಮಂತನಗರದ ಬಿಳಿಶಿವಾಲೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವೊಂದರಲ್ಲಿ ಅಡಗಿಸಿಟ್ಟಿದ್ದ 31 ವಾಚ್‌ಗಳು ಹಾಗೂ 4 ಮೊಬೈಲ್‌ಗಳನ್ನು ಮತ್ತು ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಬಚ್ಚಿಟ್ಟಿದ್ದ 125 ಗ್ರಾಂ ಚಿನ್ನಾಭರಣ, ವೈಟ್‌ಗೋಲ್ಡ್ ವಾಚ್, 2 ಸಾವಿರ ಅಮೆರಿಕನ್ ಡಾಲರ್‌ಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲದೆ, ಆಟೋ ಚಾಲನಕೊಬ್ಬನಿಗೆ 45 ಗ್ರಾಂ ಆಭರಣ ಮಾರಾಟ ಮಾಡಿದ್ದಾಗಿ ತಿಳಿಸಿದ್ದು, ಆಟೋ ಚಾಲಕನು ಆ ಆಭರಣವನ್ನು ಠಾಣೆಗೆ ತಂದು ಒಪ್ಪಿಸಿದ್ದಾನೆ.
ಒಟ್ಟಾರೆ ಆರೋಪಿಯ ಬಂಧನದಿಂದ 21 ಲಕ್ಷ ರೂ. ಮೌಲ್ಯದ 170 ಗ್ರಾಂ ಚಿನ್ನಾಭರಣಗಳು, 33 ವಾಚ್‌ಗಳು, 3,900 ಅಮೆರಿಕನ್ ಡಾಲರ್, 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯ ಬಂಧನದಿಂದ 9 ಕನ್ನಕಳವು ಪ್ರಕರಣಗಳು ಪತ್ತೆಯಾಗಿವೆ. ಇನ್‌್ಸಪೆಕ್ಟರ್ ಚೇತನ್‌ಕುಮಾರ್ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.