ಬೆಂಗಳೂರು,ಜು.1- ನಕಲಿ ಕೀ ಬಳಸಿ ಬೆಂಗಳೂರು ನಗರದಲ್ಲೇ ಬರೋಬ್ಬರಿ 133 ಮನೆಗಳ್ಳತನ ಮಾಡಿದ್ದ ಕುಖ್ಯಾತ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 75 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ(43) ಬಂಧಿತ ಮನೆಗಳ್ಳ. ಈತನಿಂದ ಕಳವು ಆಭರಣಗಳನ್ನು ಸ್ವೀಕರಿಸಿ ಜ್ಯುವೆಲರಿ ಅಂಗಡಿಗಳಲ್ಲಿ ಅಡವಿಡುತ್ತಿದ್ದ ಈತನ ಸ್ನೇಹಿತ ಗೋವಿಂದಶೆಟ್ಟಿ ಪಾಳ್ಯದ ಟೈಲರ್ ರಾಜೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
2001ರಿಂದ ಆರೋಪಿ ಪ್ರಕಾಶ್ ಮನೆಗಳ್ಳತನ ಮಾಡುತ್ತಿದ್ದನು. ಹಲವು ಬಾರಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದರೂ ಬುದ್ದಿ ಕಲಿತಿರಲಿಲ್ಲ. ಜೈಲಿಗೆ ಹೋಗಿ ಕಳೆದ ಮೇ ತಿಂಗಳಲ್ಲಿ ಹೊರಬಂದಿದ್ದು ಅತ್ತಿಬೆಲೆಯ ಎಡವನಹಳ್ಳಿಯಲ್ಲಿ ವಾಸವಾಗಿದ್ದುಕೊಂಡು ಮತ್ತೆ ಮನೆಗಳ್ಳತನ ಮುಂದುವರೆಸಿದ್ದನು.
ದೊಡ್ಡ ದೊಡ್ಡ ಮನೆಗಳೇ ಟಾರ್ಗೆಟ್:
ಜೈಲಿನಿಂದ ಹೊರಬಂದ ನಂತರವೂ ಮನೆಗಳ್ಳತನ ಮುಂದುವರೆಸಿದ್ದ. ಬೈಕ್‌ನಲ್ಲಿ ಸುತ್ತಾಡುತ್ತಾ ದೊಡ್ಡ ದೊಡ್ಡ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕಿಳಿಯುತ್ತಿದ್ದ. ಮಹಿಳಾ ಪಾದರಕ್ಷೆಗಳ ಹೆಚ್ಚಿರುವ ಮನೆಯಲ್ಲಿ ಕಳವು ಯಾವ ಮನೆ ಮುಂದೆ ಹೆಚ್ಚಾಗಿ ಮಹಿಳೆಯರ ಪಾದರಕ್ಷೆಗಳಿರುತ್ತದೆಯೋ ಅಂಥ ಮನೆಗಳಲ್ಲಿ ಚಿನ್ನಾಭರಣಗಳು ಹೆಚ್ಚಾಗಿರುತ್ತದೆ ಎಂದು ಭಾವಿಸಿ ಅಂಥ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಂತಹ ಮನೆಗಳಿಗೆ ಬಾಡಿಗೆ ಮನೆ ಕೇಳುವ ನೆಪದಲ್ಲಿ ಅಥವಾ ಮನೆ ಕೊಳ್ಳುವ ರೀತಿ ಹೋಗಿ ಮನೆಯವರನ್ನು ಮಾತನಾಡಿಸಿ ನಂಬಿಕೆ ಗಳಿಸುತ್ತಿದ್ದ. ನಂತರ ಮನೆ ನೋಡುವುದಾಗಿ ಹೇಳಿ ಒಳಗೆ ಹೋಗುತ್ತಿದ್ದ.
ಕೀ ಎಗರಿಸುತ್ತಿದ್ದ ಚೋರ:
ಮನೆಯೊಳಗೆ ಹೋದಾಗ ಕೀ ಬಂಚ್ ನೋಡಿ ಅದರಿಂದ ಒಂದು ಕೀ ಎಗರಿಸುತ್ತಿದ್ದ. ಒಂದು ವೇಳೆ ಕೀ ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಮೊಬೈಲ್‌ನಲ್ಲಿ ಕೀ ಫೋಟೋ ತೆಗೆದುಕೊಳ್ಳುತ್ತಿದ್ದ. ನಂತರ ಅದನ್ನು ನಕಲಿ ಕೀಯನ್ನಾಗಿ ತನ್ನ ಮನೆಯಲ್ಲೇ ಸಿದ್ಧಪಡಿಸಿಕೊಳ್ಳುತ್ತಿದ್ದ.
ಕದ್ದ ಕೀ ಮೇಲೆ ಹೆಸರು:
ಕಳವು ಮಾಡಿದ ಕೀಗಳನ್ನು ಒಂದೊಂದು ಕವರ್‌ನಲ್ಲಿ ಹಾಕಿ ಅದರ ಮೇಲೆ ಮನೆಯ ಮಾಲೀಕರ ಹೆಸರು ಬರೆಯುತ್ತಿದ್ದ. ಆರು ತಿಂಗಳ ನಂತರ ಕಳವು: ತಾನು ಗುರುತಿಸಿದ್ದ ಮನೆಗಳ್ಳತನಕ್ಕೆ ಆರು ತಿಂಗಳ ನಂತರ ಹೋಗುತ್ತಿದ್ದ. ಕೀ ಹಾಕಿರುವುದನ್ನು ಗಮನಿಸಿ ಆ ಮನೆಯ ನಕಲಿ ಕೀ ತೆಗೆದುಕೊಂಡು ಹೋಗಿ ಬಾಗಿಲು ತೆಗೆದು ಒಳನುಗ್ಗಿ ಹಣ, ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ.

ಗುರುತು ಮರೆಮಾಚಲು ಫುಡ್ ಡೆಲಿವರಿ ಬಾಯ್ ಟೀ ಶರ್ಟ್:
ಮನೆಗಳ್ಳತನ ಮಾಡಿರುವುದು ತಾನೆಂಬುದು ಗೊತ್ತಾಗಬಾರದೆಂದು ಕಳ್ಳತನಕ್ಕೆ ಹೋದಾಗಲೆಲ್ಲ. ತನ್ನ ಚಹರೆ ಮರೆಮಾಚುವಂತೆ ಫುಡ್ ಡೆಲಿವರಿ ಬಾಯ್‌ಯಂತೆ ಟೀಶರ್ಟ್ ಹಾಕಿಕೊಳ್ಳುತ್ತಿದ್ದ. ವೆಂಕಟಾಪುರದ ಕೋರಮಂಗಲ 1ನೇ ಹಂತದ ನಿವಾಸಿಯೊಬ್ಬರು ಮೇ 25ರಂದು ಮನೆಯ ಮುಖ್ಯ ಬಾಗಿಲನ್ನು ಲಾಕ್‌ಮಾಡಿ ಕೀಯನ್ನು ಮರೆತು ಬಾಗಿಲಿನಲ್ಲೇ ಬಿಟ್ಟು ಮಲಗಿದ್ದು, ಬೆಳಗ್ಗೆ 6 ಗಂಟೆಗೆ ಎದ್ದು ನೋಡಲಾಗಿ ಮನೆಯ ಮುಖ್ಯಬಾಗಿಲು ಹಾಕಿದ ರೀತಿಯಲ್ಲೆ ಇದ್ದು, ಮನೆಯ ಬೆಡ್‌ರೂಂ ಕಬೋರ್ಡ್‌ನ ಡ್ರಾಯರ್ ತೆರೆದಿದ್ದು ಡ್ರಾಯರ್‌ನಲ್ಲಿದ್ದ 2 ಚಿನ್ನದ ಉಂಗುರ, 1 ಜೊತೆ ಕಿವಿಯ ಓಲೆಗಳು, ಒಟ್ಟು 15 ಗ್ರಾಂ, 2 ಜೊತೆ ಬೆಳ್ಳಿಯ ಕಾಲುಚೈನ್, 100 ಗ್ರಾಂ ಆಭರಣಗಳು ಕಳವಾಗಿದ್ದು ಕಂಡುಬಂದಿದೆ.
ಸಿಕ್ಕಿಬಿದ್ದ ಚೋರ:
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಪ್ರಕಾಶ್‌ನನ್ನು ವಿ.ಪಿ.ರಸ್ತೆಯ ಆಂಜನೇಯ ದೇವಸ್ಥಾನದ ಹತ್ತಿರ ಬಂಧಿಸಿ ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿಯಿಂದ ಒಂದು ಜೊತೆ ಚಿನ್ನದ ಕಿವಿಯ ಓಲೆ 3 ಗ್ರಾಂನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ, ನಗರದ ವಿವಿಧ ಕಡೆಗಳಲ್ಲಿ ಚಿನ್ನದ ಒಡವೆಗಳನ್ನು ಮತ್ತು ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಕಳವು ಮಾಡಿದ ಚಿನ್ನಾಭರಣಗಳನ್ನು ಸ್ನೇಹಿತ ರಾಜೇಂದ್ರನಿಗೆ ನೀಡಿರುವುದಾಗಿ ಹೇಳಿದ್ದು, ಆತನನ್ನು ಸಹ ವಶಕ್ಕೆ ಪಡೆದಿದ್ದಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಳವು ಮಾಡಿದ 779 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ಇದೀಗ 13 ಪ್ರಕರಣಗಳು ಪತ್ತೆ ಮಾಡುವಲ್ಲಿ ಇನ್‌ಸ್ಪೆಕ್ಟರ್ ಮೊಹಮದ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.ಇದುವರೆಗೂ ಆರೋಪಿ ಪ್ರಕಾಶ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 120 ಪ್ರಕರಣಗಳಿವೆ. ಇದರ ಜೊತೆಗೆ ಮತ್ತೆ 13 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.