Sunday, July 21, 2024
Homeಜಿಲ್ಲಾ ಸುದ್ದಿಗಳುಆಷಾಡ ಶುಕ್ರವಾರ : ವಿಶೇಷ ಪೂಜೆಗೆ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ

ಆಷಾಡ ಶುಕ್ರವಾರ : ವಿಶೇಷ ಪೂಜೆಗೆ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ

ಮೈಸೂರು,ಜು.10- ಆಷಾಡ ಶುಕ್ರವಾರದ ಅಂಗವಾಗಿ ನಗರದ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಪ್ರತಿವರ್ಷ ಚಾಮುಂಡಿಬೆಟ್ಟದಲ್ಲಿ ಆಷಾಡ ಶುಕ್ರವಾರದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅದೇ ರೀತಿ ಈ ಬಾರಿಯೂ ಸಹ ಆಷಾಡ ಶುಕ್ರವಾರದ ಪೂಜಾ ಕೈಂಕರ್ಯಗಳು ನಡೆಯಲಿದೆ.

ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನಾಡದೇವಿಯ ದರ್ಶನ ಪಡೆಯಲಿದ್ದಾರೆ.ಭಕ್ತಾದಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈ ಬಾರಿ 12, 19, 26 ಹಾಗೂ ಆಗಸ್ಟ್‌ 2 ರಂದು ಆಷಾಡ ಶುಕ್ರವಾರ ಬರಲಿದ್ದು, ಇದರ ಜೊತೆ ಇದೇ 27 ರಂದು ಚಾಮುಂಡೇಶ್ವರಿ ಅಮನವರ ವರ್ಧಂತೋತ್ಸವ ನಡೆಯಲಿದೆ. ಪ್ರತಿ ಶುಕ್ರವಾರ ಅಮನವರಿಗೆ ವಿಶೇಷ ಪೂಜೆ ನಡೆಯಲಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಚಾಮುಂಡಿಬೆಟ್ಟಕ್ಕೆ ಕೆಎಸ್‌‍ಆರ್‌ಟಿಸಿ ಉಚಿತ ಬಸ್‌‍ ಸೇವೆ ಕಲ್ಪಿಸಿದೆ.

ಆಷಾಡದ ಅಂಗವಾಗಿ ಶನಿವಾರ ಹಾಗೂ ಭಾನುವಾರ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಲಲಿತ ಮಹಲ್‌ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

ಸಾರಿಗೆ ಬಸ್‌‍ಗಳ ಮೂಲಕ ಬೆಟ್ಟಕ್ಕೆ ಹೋಗಬಹುದಾಗಿದೆ. ಈ ಬಾರಿ ಚಾಮುಂಡೇಶ್ವರಿ ದೇವಿಯ ಪ್ರವೇಶಕ್ಕೆ ಪಾಸ್‌‍ ವ್ಯವಸ್ಥೆ ಇರುವುದಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ದರ್ಶನ ವ್ಯವಸ್ಥೆಯನ್ನು ಮಾಡಲಾಗಿದ್ದು, ನಿಗದಿಪಡಿಸಿದ ಟಿಕೆಟ್‌ ಪಡೆದು ದೇವಿಯ ದರ್ಶನ ಮಾಡಬಹುದಾಗಿದೆ.

ಭಕ್ತಾದಿಗಳ ಅನುಕೂಲಕ್ಕಾಗಿ ಲಲಿತ ಮಹಲ್‌ನ ಪಾರ್ಕಿಂಗ್‌ ಮತ್ತು ಮಹಿಷಾಸುರ ವೃತ್ತದ ಬಳಿ ಹಾಗೂ ವಿಶೇಷ ಪ್ರವೇಶದ ಬಳಿಯಲ್ಲೇ ಪ್ರವೇಶ ಟಿಕೆಟ್‌ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ.ಕುಡಿಯುವ ನೀರು, ಶೌಚಗೃಹ, ವೈದ್ಯಕೀಯ ತುರ್ತು ಚಿಕಿತ್ಸೆ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ದೇವಾಲಯದ ಸುತ್ತಮುತ್ತ ಸಿಸಿ ಕ್ಯಾಮರಾ ಹಾಗೂ ಪೊಲೀಸ್‌‍ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪ್ಲಾಸ್ಟಿಕ್‌ ಮುಕ್ತ ಆಷಾಡ :
ಬೆಟ್ಟಕ್ಕೆ ಭಕ್ತಾದಿಗಳು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಕೈಚೀಲ ಸೇರಿದಂತೆ ಇತರೆ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್‌ ತಂದಲ್ಲಿ ದಂಡ ವಿಧಿಸಲಾಗಿದೆ. ಜೊತೆಗೆ ಬೆಟ್ಟದ ಆವರಣದಲ್ಲಿರುವ ಅಂಗಡಿಗಳಲ್ಲಿಯೂ ಸಹ ಪ್ಲಾಸ್ಟಿಕ್‌ ಬಳಸಬಾರದೆಂದು ಜಿಲ್ಲಾಡಳಿತ ಸೂಚಿಸಿದೆ.

RELATED ARTICLES

Latest News