ನವದೆಹಲಿ,ಅ.5-ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳಿಗೆ ಖಲಿಸ್ತಾನ ಪರ ಉಗ್ರರು ಹಾಗೂ ನಕ್ಸಲೀಯರು ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹಸಚಿವಾಲಯ ದೇಶದ ಎಲ್ಲ ರಾಜ್ಯಗಳಲ್ಲಿರುವ ಎನ್‍ಐಎ ಕಚೇರಿ ಮತ್ತು ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪತ್ರ ಬರೆದಿದೆ.
ಕೆಲವು ದಿನಗಳ ಹಿಂದೆ ದೇಶಾದ್ಯಂತ ಖಲಿಸ್ತಾನ ಪರ ಅನುಕಂಪ ಹೊಂದಿರುವವರ ಮೇಲೆ ಎನ್‍ಐಎ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಉಗ್ರರು ಮತ್ತು ನಕ್ಸಲೀಯರು ಎನ್‍ಐಎ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಬೆದರಿಕೆವೊಡ್ಡಿದ್ದಾರೆ ಎಂದು ಗೃಹ ಇಲಾಖೆ ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದೆ.
ಪಾಕಿಸ್ತಾನದ ಗುಪ್ತಚರ ವಿಭಾಗವಾದ ಐಎಸ್‍ಐ ಜೊತೆಗೆ ಕಳೆದ ವರ್ಷ ಭಾರತದಲ್ಲಿ ನಿಷೇಧಕ್ಕೊಳಪಟ್ಟಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಕೆಲವು ಸಕ್ರಿಯ ಸದಸ್ಯರು ಕೈ ಜೋಡಿಸಿದ್ದು ಎನ್‍ಐಎ ಅಧಿಕಾರಿಗಳ ಮೇಲೆ ಯಾವುದೇ ಸಂದರ್ಭದಲ್ಲೂ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಿದೆ.
ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ
ಎನ್‍ಐಎ ಅಧಿಕಾರಿಗಳ ಬಗ್ಗೆ ರಹಸ್ಯವಾಗಿ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಕಲೆ ಹಾಕುತ್ತಿದ್ದು, ಐಎಸ್‍ಐ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದ ಸದಸ್ಯರು ಹಾಗೂ ನಕ್ಸಲೀಯರಿಗೆ ವಿದೇಶದಲ್ಲಿರುವ ಖಲಿಸ್ತಾನ ಬೆಂಬಲಿತ ಉಗ್ರರು ಆರ್ಥಿಕ ನೆರವು ಒದಗಿಸಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ಈಗಾಗಲೇ ನಿಷೇಧಕ್ಕೊಳಟ್ಟಿರುವ ಅಲ್ ಬದ್ರ್ ಸಂಘಟನೆಯು ಸಕ್ರಿಯವಾಗಲು ಹವಣಿಸುತ್ತಿದೆ. ಎನ್‍ಐಎ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ಇವರು ಪ್ರತಿ ದಾಳಿ ಮಾಡಬಹುದು. ಹೀಗಾಗಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆಯೂ ಸೂಚಿಸಲಾಗಿದೆ.
ಎನ್‍ಐಎ ಅಧಿಕಾರಿಗಳ ಮೇಲೆ ಪಿಎಫ್‍ಐ ಜೊತೆಗೆ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಯಿದ್ದೀನ್, ಆರ್‍ಪಿಎಫ್, ಪಿಎಲ್‍ಎ ಸೇರಿದಂತೆ ಮತ್ತಿತರ ಸಂಘಟನೆಗಳ ಕಣ್ಣು ಬಿದ್ದಿದೆ. ಹೀಗಾಗಿ ಭದ್ರತೆ ಒದಗಿಸುವುದು ಅತ್ಯವಶ್ಯಕ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತನಿಖಾ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಐಎಸ್‍ಐ ಕೆಲವು ಭಯೋತ್ಪಾದಕರನ್ನು ನಿಯೋಜಿಸಿದೆ. ವಿಶೇಷವಾಗಿ ಉನ್ನತ ಅಧಿಕಾರಿಗಳು, ತನಿಖಾ ಸಂಸ್ಥೆಗಳು, ಗಣ್ಯರು ಅವರ ಹಿಟ್ ಲಿಸ್ಟ್‍ನಲ್ಲಿದ್ದಾರೆ.
ಕಳೆದ ತಿಂಗಳು ಎನ್‍ಐಎ ಅಕಾರಿಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದ 62 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಹುತೇಕ ಮಾವೋವಾದಿ ನಕ್ಸಲೀಯರಿಗೆ ಬೆಂಬಲ ನೀಡುವವರು, ಹಣಕಾಸು ನೆರವು ಒದಗಿಸುವವರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗಿತ್ತು.
ಇಸ್ರೇಲ್‍ನಲ್ಲಿ ಸದ್ದು ಮಾಡುತ್ತಿದೆ ಅಖೇಲಿ ವೆಬ್‍ಸರಣಿ
ದಾಳಿಗೊಳಗಾದವರು ಬ್ಯಾಂಕ್ ಖಾತೆಗಳನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇದರಿಂದ ನಕ್ಸಲೀಯರಿಗೆ ಹೋಗುತ್ತಿದ್ದ ಆರ್ಥಿಕ ನೆರವು ಬಂದ್ ಆಗಿದೆ. ಈ ಬೆಳವಣಿಗೆಗಳಿಂದ ಕುಪಿತಗೊಂಡಿರುವ ನಕ್ಸಲೀಯರು ಎನ್‍ಐಎ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ.