ಬೆಂಗಳೂರು, ಮಾ. 26- ಬಸ್‌ನಲ್ಲಿ ಪ್ರಯಾಣಿಸುವ ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿಗಳು ಹಾಗೂ ಪಾದಚಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಮೊಬೈಲ್ಗಳನ್ನು ದರೋಡೆ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿರುವ ಎಚ್ಎಎಲ್ ಠಾಣೆ ಪೊಲೀಸರು ಒಟ್ಟು 17 ಲಕ್ಷ ಮೌಲ್ಯದ 65 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿದ ಚೋರನೊಬ್ಬ ಅವರ ಬಳಿ ಇದ್ದ ಮೊಬೈಲ್ ಕಸಿದು ಪರಾರಿಯಾಗಿದ್ದ.ಈ ಸಂಬಂಧ ಅವರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಸುಮಾರು 10 ಲಕ್ಷ ಮೌಲ್ಯದ ವಿವಿಧ ಕಂಪೆನಿಗಳ 45 ಫೋನ್ಗಳನ್ನು ಕಳವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಳವಿನ ಬಗ್ಗೆ ಬಂದ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 7 ಲಕ್ಷ ಬೆಲೆಬಾಳುವ ವಿವಿಧ ಕಂಪೆನಿಗಳ 20 ಮೊಬೈಲ್ ಫೋನ್ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.
ಇದರಲ್ಲಿ ಎಚ್ಎಎಲ್ ಠಾಣೆಗೆ ಸಂಬಂಧಪಟ್ಟ ಮೂರು ಪ್ರಕರಣಗಳು ಪತ್ತೆಯಾಗಿವೆ. ಈ ಆರೋಪಿಗಳು ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ ಹತ್ತುವಾಗ ನೂಕುನುಗ್ಗಲು ಉಂಟುಮಾಡಿ ಬ್ಯಾಗ್ ಹಾಗೂ ಜೇಬಿನಲ್ಲಿರುವ ಮೊಬೈಲ್ಗಳನ್ನು ಕಳವು ಮಾಡಿ ಸಿಮ್ಕಾರ್ಡ್ಗಳನ್ನು ತೆಗೆದು ನಂತರ ತಮಗೆ ಪರಿಚಯವಿರುವ ಇಬ್ಬರಿಗೆ ಮಾರಾಟ ಮಾಡುತ್ತಿದ್ದರು.
ಇವರು ಸಾಫ್ಟ್ವೇರ್ ಪ್ರಯಾಣಿಕ ರನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ವೈಟ್ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಿಯದರ್ಶಿನಿ ಈಶ್ವರ್ ಸಾಣೆಕೊಪ್ಪ ಅವರ ನೇತೃತ್ವದಲ್ಲಿ ಎಚ್ಎಎಲ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.