ಬೆಂಗಳೂರು,ಏ.25- ಮೋಜು ಮಸ್ತಿಗಾಗಿ ಮನೆಗಳ್ಳತನ ಮಾಡಿ ಗೋವಾಗೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಸೇರಿದಂತೆ ಮೂವರು ಮನೆಗಳ್ಳರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿ 18.10ಲಕ್ಷ ರೂ.ಮೌಲ್ಯದ 213 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಶಿವಕುಮಾರ್(27), ಸ್ನೇಹಿತರಾದ ಶಿವನಾಗಪ್ಪ ಮತ್ತು ಸುದರ್ಶನ್ ಬಂಧಿತ ಮನೆಗಳ್ಳರು. ಆರೋಪಿ ಶಿವಕುಮಾರ್ ಬಳ್ಳಾರಿ ಮೂಲದವನಾಗಿದ್ದು, ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಹೆಸರುಘಟ್ಟದಲ್ಲಿರುವ ಹಾಲೋಬ್ರಿಕ್ಸ್ ಕಾರ್ಖಾನೆಯಲ್ಲಿ ಶಿವಕುಮಾರ್ ಕೆಲಸ ಮಾಡುತ್ತಿದ್ದಾಗ ಆ ಪ್ರದೇಶ ಆತನಿಗೆ ಚೆನ್ನಾಗಿ ತಿಳಿದಿತ್ತು.
ರಾಮಗೊಂಡನಹಳ್ಳಿ ಮುಖ್ಯರಸ್ತೆಯ ನಿವಾಸಿಯೊಬ್ಬರು ಮಾ.12 ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಆರೋಪಿ ಶಿವಕುಮಾರ್ ಮತ್ತೊಬ್ಬ ಸ್ನೇಹಿತನ ಜೊತೆ ಸೇರಿ ಇವರ ಮನೆಗೆ ನುಗ್ಗಿ ಬೀರುವಿನಲ್ಲಿ ಇದ್ದ ಹಣ, ಆಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಪ್ರಮುಖ ಆರೋಪಿ ಶಿವಕುಮಾರ್ ಗೋವಾಗೆ ಹೋಗೋಣವೆಂದು ಆತನಿಗೆ ಹೇಳಿ ಡಾಬಸ್‌ಪೆಟೆಯ ಹೋಟೆಲ್‌ನಲ್ಲಿ ಊಟ ಮಾಡಿ ಮತ್ತೊಂದು ಮನೆ ಕಳ್ಳತನ ಮಾಡಿಕೊಂಡು ಬರುವುದಾಗಿ ಹೇಳಿ ನಂತರ ಮತ್ತೊಬ್ಬ ಸ್ನೇಹಿತನ ಜೊತೆ ಗೋವಾಗೆ ಪರಾರಿಯಾಗಿದ್ದಾನೆ.
ಮಾರನೆಯ ದಿನ ಬೆಳಿಗ್ಗೆ ಮನೆಯ ನಿವಾಸಿ ವಾಪಸ್ ಬಂದು ನೋಡಿದಾಗ ಮುಂಬಾಗಿಲಿನ ಬೀಗವನ್ನು ಒಡೆದಿರುವುದು ಕಂಡು ಬಂದಿದೆ. ತಕ್ಷಣ ಒಳಗೆ ಹೋಗಿ ಕಬೋಡ್ ನೋಡಿದಾಗ ಅದರಲ್ಲಿದ್ದ 45 ಗ್ರಾಂ ಚಿನ್ನಾಭರಣ ಹಾಗೂ 6 ಲಕ್ಷ ಹಣ ಕಳವು ಆಗಿರುವುದು ಗೊತ್ತಾಗಿದೆ.
ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯನ್ನು ಕಲೆಹಾಕಿ, ಹಗರಿಬೊಮನಹಳ್ಳಿ ಠಾಣಾ ವ್ಯಾಪ್ತಿಯ ದುರ್ಗಮ ದೇವಸ್ಥಾನದ ಬಳಿ ಇಬ್ಬರನ್ನು ಕೃತ್ಯಕ್ಕೆ ಬಳಸಿದ ಕಾರಿನ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವುದಾಗಿ ಹೇಳಿದ್ದು, ಮತ್ತೊಬ್ಬ ಸ್ನೇಹಿತನ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ ಅಂದು ಬೆಳಿಗ್ಗೆ ಹಗರಿಬೊಮನಹಳ್ಳಿಯಿಂದ ಸ್ನೇಹಿತನ ಜೊತೆ ನಗರಕ್ಕೆ ಪ್ರವಾಸಕ್ಕೆಂದು ಬಂದು ನಂತರ ಬೀಗ ಹಾಕಿರುವ ಮನೆಯನ್ನು ಗುರುತಿಸಿ, ಆ ಮನೆಯ ಬೀಗವನ್ನು ಹೊಡೆದು ಮನೆಯಲ್ಲಿರುವ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡೋಣವೆಂದು ತಿಳಿಸಿದ್ದಾಗಿ ಪ್ರಮುಖ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಾನೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಳ್ಳಾರಿ ಜಿಲ್ಲೆಯ ಹಗರಿ ಬೊಮನಹಳ್ಳಿ ಶಾಲೆಯೊಂದರ ಬಳಿಬಂಧಿಸಿದ್ದಾರೆ.
ಈತನನ್ನು ವಿಚಾರಣೆ ನಡೆಸಿದಾಗ ತಾನು ಮತ್ತು ನನ್ನ ಸ್ನೇಹಿತರಿಬ್ಬರು ಸೇರಿಕೊಂಡು ಇಟಿಯೋಸ್ ಕಾರನ್ನು ಕೃತ್ಯಕ್ಕೆ ಬಳಸಿರುವುದಾಗಿ ಹೇಳಿದ್ದಾನೆ.ಪ್ರಮುಖ ಆರೋಪಿಯ ಬಂಧನದಿಂದ ಇತರೆ ಮೂರು ಮನೆಗಳ್ಳತನ ಪ್ರಕರಣಗಳು ತಾನೋಬ್ಬನೇ ಮಾಡಿರುವುದಾಗಿ ತಿಳಿಸಿದ್ದಾನೆ.
ಕಳವು ಮಾಡಿದ ಚಿನ್ನಾಭರಣವೆಲ್ಲವನ್ನು ಸ್ನೇಹಿತರ ಮುಖಾಂತರ ಗಂಗಾವತಿ ಹಾಗೂ ಹಗರಿಬೊಮನಹಳ್ಳಿಯ ಚಿನ್ನದ ಅಂಗಡಿಯಲ್ಲಿ ಅಡಮಾನಟ್ಟು 6 ಲಕ್ಷ ಹಣ ಪಡೆದು ಸ್ನೇಹಿತರ ಜೊತೆ ಗೋವಾಕ್ಕೆ ಹೋಗಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಈತನ ಮಾಹಿತಿಯಂತೆ ಪೊಲೀಸರು ಚಿನ್ನದ ಅಂಗಡಿಯಿಂದ ಅಡಮಾನಟ್ಟಿದ್ದ 78 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಚಿನ್ನದ ಅಂಗಡಿಯಿಂದ 70 ಗ್ರಾಂ ಚಿನ್ನಾಭರಣವನ್ನು ಹಾಗೂ ಗಂಗಾವತಿಯಲ್ಲಿರುವ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಡಿಸಿಪಿ ಸಜಿತ್ ನೇತೃತ್ವದಲ್ಲಿ ಇನ್‌್ಸಪೆಕ್ಟರ್ ಸುಧಾಕರ್‌ರೆಡ್ಡಿ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.