Tuesday, July 29, 2025
Homeರಾಜ್ಯಕಲಾಸಿಪಾಳ್ಯದಲ್ಲಿ ಸ್ಪೋಟಕ ವಸ್ತು ಪತ್ತೆ ಪ್ರಕರಣದಲ್ಲಿ ಮೂವರ ಬಂಧನ

ಕಲಾಸಿಪಾಳ್ಯದಲ್ಲಿ ಸ್ಪೋಟಕ ವಸ್ತು ಪತ್ತೆ ಪ್ರಕರಣದಲ್ಲಿ ಮೂವರ ಬಂಧನ

Three arrested in Kalasipalya explosives case

ಬೆಂಗಳೂರು,ಜು.29-ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸ್ಪೋಟಕ ವಸ್ತು ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡಿದ್ದ ಡಿಸಿಪಿ ಗಿರೀಶ್ ಅವರ ನೇತೃತ್ವದ 60 ಮಂದಿ ಸಿಬ್ಬಂದಿ ತಂಡ ಕೊನೆಗೂ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಒಟ್ಟು 22 ಜೀವಂತ ಜೆಲಟಿನ್ ಜೆಲ್ ಹಾಗೂ 30 ಎಲೆಕ್ನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗಣೇಶ (28), ಮುನಿರಾಜು (38) ಮತ್ತು ಬೆಗ್ನಿ ಬೆಂಜನಹಳ್ಳಿ ಗ್ರಾಮದ ಶಿವಕುಮಾರ್ (32) ಬಂಧಿತರು.ಈ ಪ್ರಕರಣದಲ್ಲಿ ಸ್ಫೋಟಕವನ್ನು ಆರೋಪಿಗಳಿಗೆ ನೀಡಿದ ಮಾಲೀಕನನ್ನು ಪತ್ತೆಹಚ್ಚಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಪೋಟಕ ವಸ್ತುಗಳಿದ್ದ ಬ್ಯಾಗ್‌ನ್ನು ಶೌಚಾಲಯದ ಹೊರಗಿಟ್ಟು ಹೋಗಿ ವಾಪಸ್ ಬಂದಾಗ ಪೊಲೀಸರನ್ನು ನೋಡಿ ಗಾಬರಿಯಾಗಿ ಬ್ಯಾಗ್‌ನ್ನು ಅಲ್ಲೆ ಬಿಟ್ಟು ಹೋಗಿದ್ದರು.ಕೆಲ ಸಮಯದ ಬಳಿಕ ಅನುಮಾನಾಸ್ಪದವಾಗಿ ಕಂಡ ಬ್ಯಾಗ್‌ನ್ನು ನೋಡಿ ಬಿಎಂಟಿಸಿ ಸಹಾಯಕ ಸಂಚಾರ ಅಧಿಕಾರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಬಂದು ನೋಡಿದಾಗ ಬ್ಯಾಗ್‌ನಲ್ಲಿ 6 ಜೆಲಟಿನ್ ಜೆಲ್, 12 ಎಲೆಕ್ನಿಕ್ ಡಿಟೋನೇಟರ್‌ಗಳು ಪತ್ತೆಯಾಗಿದ್ದವು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ 60 ಮಂದಿಯ ಐದು ತಂಡಗಳನ್ನು ರಚಿಸಲಾಗಿತ್ತು.

ಈ ತಂಡಗಳು ಕಾರ್ಯಪ್ರವೃತ್ತರಾಗಿ ತಾಂತ್ರಿಕ ಸಹಾಯದಿಂದ ಕೋಲಾರ ಮೂಲದ ಮೂವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಒಟ್ಟು 22 ಜೀವಂತ ಜೆಲಟಿನ್ ಜೆಲ್ ಹಾಗೂ 30 ಎಲೆಕ್ನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸ್ಪೋಟಕಗಳನ್ನು ತೆಗೆದುಕೊಂಡು ಬೋರ್‌ವೆಲ್ ಕೊರೆಯಲು ಕೋಲಾರದಿಂದ ಕೊಳ್ಳೇಗಾಲಕ್ಕೆ ಹೋಗುತ್ತಿದ್ದುದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದು ತನಿಖೆ ಪ್ರಗತಿಯಲ್ಲಿದೆ.ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಎಸ್. ನೀಲಗಾರ್ ಹಾಗೂ ಇತರೆ ಸಿಬ್ಬಂದಿ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News