ಬೆಂಗಳೂರು, ಮೇ 28-ನಗರದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿಕೊಂಡು ತಮಿಳುನಾಡಿಗೆ ಪರಾರಿಯಾಗುತ್ತಿದ್ದ ಕ್ಯಾಬ್ ಚಾಲಕ ಸೇರಿದಂತೆ ಮೂವರನ್ನು ಹೆಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ವೌಲ್ಯದ 550 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ತಮಿಳುನಾಡಿನ ದಿನಕರನ್ (38) ರಘುರಾಮ್ (28) ಹಾಗೂ ಕಳವು ವಸ್ತುಗಳನ್ನು ಸ್ವೀಕರಿಸುತ್ತಿದ್ದ ಆರ್ಮುಗಮ್ (58) ಬಂಧಿತರು.
ಕ್ಯಾಬ್ ಚಾಲಕನಾಗಿರುವ ದಿನಕರನ್ ವಿರುದ್ಧ ಎಂಟು ಪ್ರಕರಣಗಳು ಹಾಗೂ ರಘುರಾಮ್ ವಿರುದ್ಧ ಎರಡು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.ತಮಿಳುನಾಡಿನಿಂದ ದಿನಕರನ್ ನಗರಕ್ಕೆ ಬಂದು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡಿಕೊಂಡು ತಮಿಳುನಾಡಿಗೆ ಹೋಗಿ ಆರ್ಮುಗಮ್ ಹಾಗೂ ರಘುರಾಮ್‌ಗೆ ಕಳವು ವಸ್ತುಗಳನ್ನು ಕೊಡುತ್ತಿದ್ದದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಹೆಚ್‌ಎಎಲ್‌ನ ಎಇಸಿಎಸ್ ಲೇಔಟ್‌ನಲ್ಲಿ ವಾಸವಿರುವ ಕಮಲ್‌ಚರಣ್ ಎಂಬುವವರು ಹೋಲ್‌ಸೇಲ್ ಪೀಠೋಪಕರಣ ಅಂಗಡಿ ಇಟ್ಟುಕೊಂಡಿದ್ದಾರೆ.ಮಾರ್ಚ್ 4 ರಂದು ಸಂಜೆ ಅವರು ಕುಟುಂಬ ಸಮೇತ ಚೆನೈಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಕಿಟಕಿಯ ಗ್ರಿಲ್ ಮುರಿದು ಒಳನುಗ್ಗಿ ಬೀರುವನ್ನು ಮೀಟಿ ಕೈಗೆ ಸಿಕ್ಕಿದ 3 ಲಕ್ಷ ರೂ. ಹಾಗೂ ಚಿನ್ನಾಭರಣಗಳನ್ನು ಲೂಟಿ ಮಾಡಿಕೊಂಡು ಪರಾರಿಯಾಗಿದ್ದರು.
ಮಾರ್ಚ್ 6 ರಂದು ಕಮಲ್‌ಚರಣ್ ಕುಟುಂಬ ಮನೆಗೆ ವಾಪಸ್ ಆದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಶಿಕಾರಿಪಾಳ್ಯದ ಆಟೋ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳ ಪಡಿಸಿದಾಗ, ಇಬ್ಬರು ಸಹಚರರೊಂದಿಗೆ ಸೇರಿ ಮನೆಗಳ್ಳತನ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ.
ಈತನ ಮಾಹಿತಿಯಂತೆ ತಮಿಳುನಾಡಿನ ತಿರುವಾರೂರ್ ನಲ್ಲಿರುವ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿ ಸಹಚರ ರಘುರಾಮ್‌ನಿಂದ 278 ಗ್ರಾಂ ಚಿನ್ನಾಭರಣ ಹಾಗೂ ಪಾಂಡಿಚೇರಿಯ ಆರ್ಮುಗಮ್‌ನಿಂದ 172 ಗ್ರಾಂ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ ಈ ಮೂವರು ಆರೋಪಿಗಳಿಂದ 50 ಲಕ್ಷ ರೂ. ವೌಲ್ಯದ 550 ಗ್ರಾಂ ಚಿನ್ನಾಭರಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್ ಅಜರುದ್ದೀನ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.