Wednesday, December 4, 2024
Homeಬೆಂಗಳೂರುಮೀಶೂ ಕಂಪನಿಗೆ 5.50 ಕೋಟಿ ವಂಚಿಸಿದ್ದ ಮೂವರು ವಂಚಕರ ಬಂಧನ

ಮೀಶೂ ಕಂಪನಿಗೆ 5.50 ಕೋಟಿ ವಂಚಿಸಿದ್ದ ಮೂವರು ವಂಚಕರ ಬಂಧನ

Three fraudsters arrested for defrauding Meeshu company

ಬೆಂಗಳೂರು,ಡಿ.3- ಮೀಶೂ ಕಂಪನಿಗೆ 5.50 ಕೋಟಿ ವಂಚಿಸಿದ್ದ ಗುಜರಾತ್ ರಾಜ್ಯದ ಮೂವರು ಸೈಬರ್ ಕ್ರೈಂ ವಂಚಕರನ್ನು ನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಜನವರಿ-2024 ರಿಂದ ಜುಲೈ-2024 ರವರೆಗೆ 7 ತಿಂಗಳ ಅವಧಿಯಲ್ಲಿ ಮೀಶೂ ಕಂಪನಿಗೆ 5.50 ಕೋಟಿ ನಷ್ಟವಾಗಿದೆ ಎಂದು ನೋಡಲ್ ಅಧಿಕಾರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಳೆದ ಜು.1 ರಂದು ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಕಂಪನಿಯಿಂದ ಆನ್ಲೈನ್ ಮುಖಾಂತರ ಹಣವನ್ನು ವರ್ಗಾವಣೆ ಮಾಡಿಕೊಂಡ ಬ್ಯಾಂಕ್ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವಾರು ಮೊಬೈಲ್ ಪೋನ್ ನಂಬರ್ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಈ ಪ್ರಕರಣದಲ್ಲಿ ವಂಚಕರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ, ಅವರು ಗುಜರಾತ್ ರಾಜ್ಯದಲ್ಲಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ಕಳುಹಿಸಲಾಗಿತ್ತು.

ಕಳೆದ ನ.21ರಂದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂರು ಆರೋಪಿಗಳನ್ನು ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಪತ್ತೆಹಚ್ಚಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ವಶಕ್ಕೆ ಪಡೆದ ಮೂವರನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಇತರೆ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿದ್ದು ಅವರು ತಲೆಮೆರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಗುಜರಾತ್ನ ಸೂರತ್ ನಗರದಲ್ಲಿ ಓಂ ಸಾಯಿ ಪ್ಯಾಷನ್ ಎಂಬ ನಕಲಿ ಕಂಪನಿಯನ್ನು ತೆರೆದು, ಮೀಶೋ ಕಂಪನಿಯ ಪ್ಲಾಟ್ಫಾರ್ಮ್ ಮೂಲಕ ಗ್ರಾಹಕರಂತೆ ಬಿಂಬಿಸಿ, ಪ್ರತಿದಿನ ಸರಾಸರಿ 2,000 ರಿಂದ 2,500 ವಿವಿಧ ಪ್ರಾಡಕ್ಟ್ಗಳನ್ನು ಆರೋಪಿಗಳೇ ಅರ್ಡರ್ ಮಾಡಿ, ಗ್ರಾಹಕರುಗಳ ಹೆಸರು ಮತ್ತು ವಿಳಾಸಗಳನ್ನು ತಪ್ಪಾಗಿ/ಸುಳ್ಳಾಗಿ ನೀಡಿ ಕಂಪನಿಗೆ ಬುಕ್ ಮಾಡಿರುವುದು ಗೊತ್ತಾಗಿದೆ.

ಈ ರೀತಿ ತಪ್ಪಾಗಿ ನೀಡಿದ ಗ್ರಾಹಕರ ವಿಳಾಸದಿಂದ ಪಾರ್ಸಲ್ಗಳು ಹಿಂತಿರುಗುತ್ತದೆ. ಹಿಂತಿರುಗಿದ ಪ್ರಾಡಕ್ಟ್ ಇರುವ ಪಾರ್ಸಲ್ನಲ್ಲಿರುವ ವಸ್ತುವನ್ನು ಆರೋಪಿಗಳು ಬದಲಾಯಿಸಿ, ಕಂಪನಿಯವರಿಗೆ ಪಾರ್ಸಲ್ನಲ್ಲಿದ್ದ ವಸ್ತು ಬದಲಾಗಿದೆ ಎಂದು ವಿಡಿಯೋ ಮಾಡಿ ಆ ವಿಡಿಯೋವನ್ನು ಕಂಪನಿಯವರಿಗೆ ಕಳುಹಿಸಿ, ಪ್ರಾಡಕ್ಷಗಳ ಮೌಲ್ಯದಷ್ಟು ಹಣವನ್ನು ಕ್ಲೈಮ್ ಮಾಡಿರುತ್ತಾರೆ. ಈ ರೀತಿ ಕ್ಲೈಮ್ ಮಾಡಿದ ಹಣವು ಸ್ವಯಂ ಚಾಲಿತವಾಗಿ ಕಂಪನಿಯವರಿಂದ ಆರೋಪಿತರ ಖಾತೆಗೆ ಪಾವತಿಯಾಗುತ್ತದೆ. ಈ ರೀತಿಯಾಗಿ ಒಟ್ಟು 5 ಕೋಟಿ 50 ಲಕ್ಷಗಳನ್ನು ಇದುವರೆಗೂ ಆರೋಪಿಗಳು ಹೊಂದಿರುವ ವಿವಿಧ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿಸಿಕೊಂಡಿರುತ್ತಾರೆಂದು ತನಿಖೆಯಿಂದ ತಿಳಿದುಬಂದಿರುತ್ತದೆ.

ಆನ್ಲೈನ್ನಲ್ಲಿ ಗ್ರಾಹಕರುಗಳು ವಿವಿಧ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್ಲೈನ್ಅಥವಾ ನಗದಾಗಿ ಹಣವನ್ನು ನೀಡುತ್ತಾರೆ.
ಈ ಹಿಂದೆ 2023ನೇ ಸಾಲಿನಲ್ಲಿ ವೈಟ್ಫೀಲ್‌್ಡ ಸೆನ್ ಪೊಲೀಸ್ ಠಾಣೆಯಲ್ಲಿ ಕಂಪನಿಯವರು ಪ್ರಕರಣವನ್ನು ದಾಖಲಿಸಿದ್ದು, ಈ ಪ್ರಕರಣದಲ್ಲಿಯೂ ಸಹ ಈ ಆರೋಪಿಗಳೇ ಭಾಗಿಯಾಗಿರುತ್ತಾರೆಂದು ತನಿಖೆಯಿಂದ ದೃಢಪಟ್ಟಿರುತ್ತದೆ.

ಈ ಪ್ರಕರಣದ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾದಗಳು) ಚಂದ್ರಗುಪ್ತ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಅಪರಾದಗಳು) ಆರ್.ಶ್ರೀನಿವಾಸ ಗೌಡ, ಐ.ಪಿ.ಎಸ್, ರವರ ನೇತೃತ್ವದಲ್ಲಿ, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್‌್ಸಪೆಕ್ಟರ್ ಹಜರೇಶ್ ಕಿಲ್ಲೇದಾರ್ ಹಾಗೂ ಸಿಬ್ಬಂದಿಯವರು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News