Tuesday, September 17, 2024
Homeರಾಜ್ಯಕರ್ನಾಟಕಕ್ಕೆ ಮೂರು ವೈದ್ಯಕೀಯ ಕಾಲೇಜುಗಳು ಮಂಜೂರು

ಕರ್ನಾಟಕಕ್ಕೆ ಮೂರು ವೈದ್ಯಕೀಯ ಕಾಲೇಜುಗಳು ಮಂಜೂರು

ಬೆಂಗಳೂರು : ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ)ವು ಕರ್ನಾಟಕಕ್ಕೆ ಈ ಬಾರಿ ಮೂರು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದೆ.ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ನಗರೂರ್, ಬೆಂಗಳೂರು ಉತ್ತರ), ಪಿಇಎಸ್ ವಿಶ್ವವಿದ್ಯಾನಿಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ(ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು) ಮತ್ತು ಎಸ್‍ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಾಗಲಕೋಟೆ).

ಈ ಮೂರು ವೈದ್ಯಕೀಯ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭವಾಗಲಿದೆ. ಬಿಜೆಜಿಎಸ್‍ಗೆ 150, ಪಿಇಎಸ್‍ಗೆ 100 ಹಾಗೂ ಬಾಗಲಕೋಟೆ ಎಸ್‍ಆರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ 100 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.

ರಾಜ್ಯದಿಂದ ಈ ಬಾರಿ ಒಟ್ಟು ಐದು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಬೇಕೆಂದು ಎನ್‍ಎಂಸಿಗೆ ಮನವಿ ಮಾಡಲಾಗಿತ್ತು. ಆದರೆ ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೆಲವು ತಾಂತ್ರಿಕ ಕಾರಣಗಳಿಂದ ಅನುಮೋದನೆ ನೀಡಿಲ್ಲ.

ಪ್ರಸ್ತುತ ಮೂರು ವೈದ್ಯಕೀಯ ಕಾಲೇಜುಗಳು ಹೊಸದಾಗಿ ಪ್ರಾರಂಭ ಆಗುತ್ತಿರುವುದರಿಂದ ಪ್ರಸ್ತುತ ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 73ಕ್ಕೆ ಏರಿದೆ. ಸದ್ಯ 11,745 ವೈದ್ಯಕೀಯ ಸೀಟುಗಳು ಲಭ್ಯವಾಗುತ್ತಿದ್ದು, 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಸೀಟುಗಳ ಸಂಖ್ಯೆ 12,095ಕ್ಕೆ ಏರಿಕೆಯಾಗಲಿದೆ.

ಒಂದು ವೇಳೆ ರಾಮನಗರ ಮತ್ತು ಕನಕಪುರಕ್ಕೂ ಈ ವರ್ಷದಿಂದಲೇ ವೈದ್ಯಕೀಯ ಕಾಲೇಜುಗಳ ಪ್ರಾರಂಭಕ್ಕೆ ಎನ್‍ಎಂಸಿ ಅನುಮೋದನೆ ನೀಡಿದರೆ ಹೆಚ್ಚುವರಿಯಾಗಿ ಇನ್ನು 300 ವೈದ್ಯಕೀಯ ಸೀಟುಗಳು ಸಿಗಲಿವೆ ಎಂದು ತಿಳಿದುಬಂದಿದೆ.ರಾಮನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಿಬ್ಬಂದಿ ಕೊರತೆ ಮತ್ತು 650 ಬೆಡ್‍ಗಳು ಇರಬೇಕೆಂಬ ನಿಯಮವಿದೆ.

ಪ್ರಸ್ತುತ ರಾಮನಗರದಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲು ತಡವಾಗಿದೆ. ಒಂದು ವೈದ್ಯಕೀಯ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಬೇಕಾದರೆ ಎಂಎನ್‍ಸಿ ಮತ್ತು ಎಂಸಿಐನ ಕೆಲವು ಮಾನದಂಡಗಳನ್ನು ಪಾಲಿಸಲೇಬೇಕು.

ನಿಯಮಗಳು:
2024-25ನೇ ಶೈಕ್ಷಣಿಕ ಸಾಲಿನಿಂದ ಆರಂಭವಾಗುವ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳ ಮಿತಿಯನ್ನು ಗರಿಷ್ಠ 150ಕ್ಕೆ ನಿಗದಿಪಡಿಸಿದೆ.ರಾಜ್ಯಗಳಲ್ಲಿರುವ 10 ಲಕ್ಷ ಜನಸಂಖ್ಯೆಗೆ 100 ವೈದ್ಯಕೀಯ ಪದವಿ ಸೀಟುಗಳು ಎಂಬ ಅನುಪಾತಕ್ಕೆ ಅನುಗುಣವಾಗಿ ಈ ಮಾನದಂಡ ರೂಪಿಸಲಾಗಿದೆ. ಹೊಸ ವೈದ್ಯಕೀಯ ಕಾಲೇಜುಗಳಲ್ಲಿನ ವೈದ್ಯಕೀಯ ಪದವಿ ಕೋರ್ಸ್, ಹೊಸ ವೈದ್ಯಕೀಯ ಕೋರ್ಸ್ ಆರಂಭ, ಹಾಲಿ ಇರುವ ಸೀಟುಗಳ ಹೆಚ್ಚಳ, ಮೌಲ್ಯಮಾಪನ ಮತ್ತು ಮೌಲ್ಯಾಂಕನ ನಿಯಮಗಳಿಗೆ ಸಂಬಂಧಿಸಿದಂತೆ ಆಯೋಗ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಈ ಬಗ್ಗೆ ವಿವರಿಸಲಾಗಿದೆ.

*ಯಾವುದೇ ಕಾಲೇಜಿಗೆ ಹೆಚ್ಚುವರಿಯಾಗಿ ಅನುಮತಿಸಿದ ಕೋಟಾ ಸೀಟುಗಳು ಕೂಡ ಕಾಲೇಜಿಗೆ ಮಂಜೂರು ಮಾಡಿರುವ ಒಟ್ಟು ಸೀಟುಗಳ ಮಿತಿಯನ್ನು ಮೀರಬಾರದು.*ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರುವ ಹೊಸ ವೈದ್ಯಕೀಯ ಕಾಲೇಜುಗಳಿಗೆ ಮೊದಲ ಮೂರು ವರ್ಷಗಳಲ್ಲಿ ಅನುಕ್ರಮವಾಗಿ 50, 100 ಹಾಗೂ 150 ಸೀಟುಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.

*ಹೊಸ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸುಸಜ್ಜಿತ ಆಸ್ಪತ್ರೆ ಇರಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರಬೇಕು.
*ಆಸ್ಪತ್ರೆಯು ಕನಿಷ್ಠ 220 ಹಾಸಿಗೆ ಸಾಮಥ್ರ್ಯ ಹೊಂದಿರಬೇಕು. ಕಾಲೇಜು ಮತ್ತು ಆಸ್ಪತ್ರೆ ನಡುವೆ ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಯ ಪ್ರಯಾಣದ ಅಂತರ 30 ನಿಮಿಷಕ್ಕೂ ಹೆಚ್ಚಿರಬಾರದು.
*ಸಹಾಯಕ ವೈದ್ಯರಿಗೆ ನೆರವಾಗುವಂತೆ ಕಾಲೇಜಿನ ವ್‍ಯಾಪ್ತಿಯಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಇರಬೇಕು
*ಪ್ರತಿ ವೈದ್ಯಕೀಯ ಸಂಸ್ಥೆಯಲ್ಲೂ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಪೂರಕವಾಗುವಂತಹ ಸುಸಜ್ಜಿತ ಪ್ರಯೋಗಾಲಯ ಇರಬೇಕು

RELATED ARTICLES

Latest News