ರಾಯ್‍ಪುರ, ಅ.6-ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ.
ತೆಲಂಗಾಣದ ನಕ್ಸಲ್ ವಿರೋಧಿ ಪಡೆ ಗ್ರೇಹೌಂಡ್ಸ್ ತಂಡವು ಕಾರ್ಯಾಚರಣೆಯಲ್ಲಿದ್ದಾಗ ಅಂತರರಾಜ್ಯ ಗಡಿಯಲ್ಲಿರುವ ಪೂಜಾರಿ ಕಂಕೇರ್ ಅರಣ್ಯದಲ್ಲಿ ಎನ್‍ಕೌಂಟರ್ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರೇಹೌಂಡ್ಸ್ ತಂಡಕ್ಕೆ ಸಹಾಯಕ ಬೆಂಬಲವನ್ನು ನೀಡಲು ಛತ್ತೀಸ್‍ಗಢ ಪೊಲೀಸರ ತಂಡವೂ ಸ್ಥಳದಲ್ಲಿದೆ ಎಂದು ಅವರು ಹೇಳಿದರು.ಪ್ರಸ್ತುತ ಮಾಹಿತಿಯಂತೆ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲೀಯರು ಸಾವನ್ನಪ್ಪಿದ್ದು, ಸ್ಥಳದಿಂದ ಶಸ್ತ್ರಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ,ಈ ವಾರದ ಆರಂಭದಲ್ಲಿ, ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ 13 ನಕ್ಸಲೀಯರು ಹತರಾಗಿದ್ದರು.