ಬೆಂಗಳೂರು,ಏ.27- ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಿನ್ನೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮತಯಂತ್ರಗಳನ್ನು ಆಯಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗಿದ್ದು, ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ.
ಮತದಾನ ಮುಕ್ತಾಯವಾಗಿದ್ದರೂ ಫಲಿತಾಂಶಕ್ಕಾಗಿ ಜೂನ್ 4 ರವರೆಗೂ ಕಾಯಬೇಕಿದೆ. ಜೂ.4 ರಂದು ಮತ ಎಣಿಕೆ ನಡೆಯಲಿದ್ದು, ಅಂದು ಎಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿಯ 11, ಜೆಡಿಎಸ್‌ನ 3, ಕಾಂಗ್ರೆಸ್‌ನ 14 ಮಂದಿ ಸೇರಿದಂತೆ ಒಟ್ಟು 247 ಅಭ್ಯರ್ಥಿಗಳು ಮೊದಲ ಹಂತದ 14 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದ್ದರು.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅರಮನೆ ರಸ್ತೆಯ ವೌಂಟ್‌ಕಾರ್ಮಲ್ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದು, ಅದೇ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅನ್ನು ವಿಟ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ಅನ್ನು ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದು, ಅದೇ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.