ನವದೆಹಲಿ,ಅ.4- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ ತಿರುಪತಿ ಲಡ್ಡು ವಿವಾದ ಸಂಬಂಧ ಹೊಸದಾಗಿ ಸಿಬಿಐ ಉಸ್ತುವಾರಿಯಲ್ಲಿ ಐದು ಜನರ ನೇತೃತ್ವದ ಸ್ವತಂತ್ರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿದೆ.
ಈ ತನಿಖಾ ತಂಡದಲ್ಲಿ ಇಬ್ಬರು ಆಂಧ್ರಪ್ರದೇಶದ ಪೊಲೀಸರು, ಮತ್ತಿಬ್ಬರು ಸಿಬಿಐ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಐಎ)ದ ಓರ್ವ ಸದಸ್ಯರು ಇರಬೇಕೆಂದು ಸೂಚಿಸಿದೆ.ಆಂಧ್ರಪ್ರದೇಶ ಸರ್ಕಾರ ರಚಿಸಿದ್ದ ಎಸ್ಐಟಿ ಬದಲಿಗೆ ಹೊಸ ತನಿಖಾ ತಂಡವನ್ನು ರಚಿಸಿ ಇದರ ಉಸ್ತುವಾರಿಯನ್ನು ಸಿಬಿಐ ನಿರ್ದೇಶಕರು ನೋಡಿಕೊಳ್ಳಬೇಕೆಂದು ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಕೆ.ವಿ.ವಿಶ್ವನಾಥ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕೋಟ್ಯಂತರ ಜನರ ಭಾವನೆಗಳ ಜೊತೆಗೆ ರಾಜಕೀಯ ನಾಟಕ ಮಾಡಬೇಡಿ ಎಂದು ಕಟು ಶಬ್ದಗಳಲ್ಲಿ ಖಂಡಿಸಿದರು.
ಇದು ಕೇವಲ ಒಂದಿಬ್ಬರ ಪ್ರಶ್ನೆಯಲ್ಲ. ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ತಿರುಪತಿ ತಿಮಪ್ಪನಿಗೆ ವಿಶ್ವದಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ. ಅವರ ಭಾವನೆಗಳ ಜೊತೆ ರಾಜಕೀಯ ಬೆರೆಸುವುದು ಒಪ್ಪಲು ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಈ ಆರೋಪವು ವಿಶ್ವದಾದ್ಯಂತ ಜನರ ಭಾವನೆಗಳನ್ನು ಘಾಸಿಗೊಳಿಸುವ ಪ್ರಯತ್ನವಾಗಿದೆ. ನಾವು ಈ ಸಂದರ್ಭದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಆರೋಪ, ಪ್ರತ್ಯಾರೋಪಗಳ ಬಗ್ಗೆ ನಾವು ಏನೂ ಹೇಳಲು ಬಯಸುವುದಿಲ್ಲ. ಲಡ್ಡು ವಿವಾದ ರಾಜಕೀಯವಾಗಬಾರದಷ್ಟೇ ಎಂಬುದು ನಮ ಉದ್ದೇಶವಾಗಿದೆ ಎಂದು ನ್ಯಾಯಮೂರ್ತಿ ಗವಾಯಿ ತಿಳಿಸಿದರು.
ನಮ ಆದೇಶವು ರಾಜ್ಯ ಎಸ್ಐಟಿಯ ಸದಸ್ಯರ ಮೇಲಿನ ಸ್ವತಂತ್ರ ಮತ್ತು ನ್ಯಾಯಯೋಜಿತ ಪ್ರತಿಬಿಂಬದಂತೆ ಅರ್ಥೈಸಬಾರದು ಎಂದು ನಾವು ಸ್ಪಷ್ಟಪಡಿಸುತ್ತೇವೆ. ಏಕೆಂದರೆ ಶ್ರೀ ವೆಂಕಟೇಶ್ವರನಿಗೆ ವಿಶ್ವದಾದ್ಯಂತ ಭಕ್ತರಿದ್ದಾರೆ. ಅವರ ನಂಬಿಕೆಗಳಿಗೆ ಚ್ಯುತಿಯಾಗಬಾರದೆಂದು ಎದ್ದಿರುವ ಅಪನಂಬಿಕೆಯನ್ನು ತಣಿಸಲು ಈ ಸಮಿತಿಯನ್ನು ರಚಿಸುತ್ತಿದ್ದೇವೆ ಎಂದು ವಿಶ್ವನಾಥ್ ಹೇಳಿದರು.
ಏನಿದು ವಿವಾದ:
ತಿರುಮಲ ತಿರುಪತಿಯ ಲಡ್ಡುವಿನಲ್ಲಿ ಗೋವು, ಹಂದಿಯ ಚರ್ಬಿ, ಮೀನಿನ ಎಣ್ಣೆ ಬೆರೆಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿಕೆ, ಗುಜರಾತ್ನ ಪ್ರಯೋಗಾಲಯದ ವರದಿಯು ಈಗ ರಾಜಕೀಯ ಜಟಾಪಟಿಯ ಜತೆಗೆ ಭಕ್ತರಲ್ಲಿ ಆತಂಕ ಮೂಡಿಸಿತ್ತು.
ಆಂಧ್ರಪ್ರದೇಶದ ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ವಿರುದ್ಧ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇವಸ್ಥಾನವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿದ್ದರು.ತುಪ್ಪ ಖರೀದಿ ಟೆಂಡರ್ನಲ್ಲಿ ಅವ್ಯವಹಾರ ನಡೆದಿರುವ ಪರಿಣಾಮ ಕಳಪೆ ಗುಣಮಟ್ಟದ ಹಾಗೂ ಕಲಬೆರಕೆಯಾದ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ಪ್ರತಿದಿನ ಸುಮಾರು 3 ಲಕ್ಷ ಲಾಡು ಬೇಡಿಕೆ ಇರುವ ಪ್ರಸಿದ್ಧ ಹಾಗೂ ಪವಿತ್ರ ತಿರುಪತಿ ಲಾಡುಗೆ ಕಲಬೆರಕೆಯಾಗಿದೆ ಎಂದು ದೂರಿದ್ದರು.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಿರುಪತಿಯಲ್ಲಿ ಲಡ್ಡು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದರು ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಕೂಡ ಹೇಳಿದ್ದರು.
ನಮಲ್ಲಿ ಕಲಬೆರಕೆ ಪತ್ತೆಗೆ ಪರೀಕ್ಷಾ ಸೌಲಭ್ಯಗಳ ಕೊರತೆಯಿಂದಾಗಿ ದೇವಸ್ಥಾನಕ್ಕೆ ತುಪ್ಪ ಪೂರೈಕೆ ಮಾಡುತ್ತಿದ್ದವರು ಪರಿಸ್ಥಿತಿಯ ಲಾಭ ಪಡೆದಿದ್ದಾರೆ. ಆಯ್ದ ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಬಹಿರಂಗಗೊಂಡಿದೆ ಎಂದು ತಿಳಿಸಿದ್ದರು.
ಕಳೆದ ಕೆಲ ತಿಂಗಳುಗಳಿಂದ ಲಾಡುವಿನ ಗುಣಮಟ್ಟದ ಕುರಿತು ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು. ಈ ನಿಟ್ಟಿನಲ್ಲಿ ಪ್ರಯೋಗಾಲಯದ ವರದಿಯನ್ನು ತರಿಸಿಕೊಳ್ಳುವ ಸಿದ್ಧತೆಯನ್ನು ನಡೆಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದರು.
ಪ್ರಯೋಗಾಲಯದ ವರದಿ ಏನು?:
ತಿರುಪತಿ ಲಡ್ಡುವಿನ ಗುಣಮಟ್ಟದ ಕುರಿತು ಗುಜರಾತ್ನಲ್ಲಿರುವ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ಜಾನುವಾರು ಪ್ರಯೋಗಾಲಯ ಎನ್ಡಿಡಿಬಿ ಕಾಫ್ ಲಿಮಿಟೆಡ್ ಜುಲೈ 17ರಂದು ವರದಿ ನೀಡಿತ್ತು. ಇದನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ ಇದು ವೈಎಸ್ಆರ್ಸಿಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ನಡೆದಿದ್ದು ಎಂಬ ಅಂಶ ಈಗ ರಾಜಕೀಯ ವಲಯದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.