ಬಿಜಾಪುರ( ಛತ್ತೀಸ್‌ಘಡ), ಮಾ.31– ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಛತ್ತೀಸ್‌ಘಡಕ್ಕೆ ಭೇಟಿ ನೀಡುವ ಮುನ್ನವೇ 50 ನಕ್ಸಲರು ಶರಣಾಗಿದ್ದಾರೆ. ಸಿಆರ್ ಪಿಎಫ್ ಅಧಿಕಾರಿಗಳ ಸಮ್ಮುಖದಲ್ಲಿ 50 ನಕ್ಸಲರು ಶರಣಾಗಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ. ಶರಣಾದವರ ಪೈಕಿ 14 ನಕ್ಸಲರ ತಲೆಯ ಮೇಲೆ 68 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು.
ಮಾವೋವಾದಿಗಳ ಅಮಾನವೀಯ ಸಿದ್ಧಾಂತ ಮತ್ತು ಶೋಷಣೆಯಿಂದ ಬೇಸತ್ತಿರುವ ನಕ್ಸಲರು ರಕ್ತಪಾತ ಮತ್ತು ಹಿಂಸಾಚಾರದ ಹಾದಿಯನ್ನು ತ್ಯಜಿಸಲು ನಿರ್ಧರಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಸರ್ಕಾರ ನಡೆಸುತ್ತಿರುವ ನನ್ನ ಒಳ್ಳೆಯ ಗ್ರಾಮ ಯೋಜನೆಯಿಂದ ಸ್ಫೂರ್ತಿ ಪಡೆದಿರುವ ನಕ್ಸಲರು ಶರಣಾಗಿದ್ದಾರೆ.
ದೂರದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶಿಬಿರಗಳನ್ನು ತೆರೆಯುತ್ತಿದ್ದು, ನಕ್ಸಲರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೇ ಶರಣಾಗಲು ಮತ್ತು ಮುಖ್ಯ ವಾಹಿನಿಗೆ ಸೇರಲು ನಿರ್ಧರಿಸಿದ್ದಾರೆಂದು ಬಿಜಾಪುರ ಎಸ್ಪಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಶಾಂತಿಯ ಹೊಸ ಯುಗ ಆರಂಭ :
ಛತ್ತೀಸ್‌ಘಡದ ಬಿಲಾಸ್‌ಪುರದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ, ಶಾಂತಿಯ ಹೊಸಯುಗ ಆರಂಭವಾಗಿದೆ. ಕಾಂಗ್ರೆಸ್‌ನ ನೀತಿಗಳು ನಕ್ಸಲಿಸಂಗೆ ಕಾರಣವಾಗಿತ್ತು. ಆದರೆ ಪರಿಸ್ಥಿತಿ ಈಗ ವೇಗವಾಗಿ ಬದಲಾಗುತ್ತಿದ್ದು, ರಾಜ್ಯದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಸಹ ಶಾಂತಿಯ ಹೊಸ ಯುಗ ಉದಯವಾಗುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ನೀತಿಗಳಿಂದಾಗಿ ಛತ್ತೀಸ್ ಘಡ ಸೇರಿ ಹಲವು ರಾಜ್ಯಗಳಲ್ಲಿ ನಕ್ಸಲಿಸಂ ಪ್ರಬಲವಾಯಿತು. ಹಿಂದುಳಿದ ಪ್ರದೇಶಗಳಲ್ಲಿ ನಕ್ಸಲಿಸಂ ಪ್ರವರ್ಧಮಾನಕ್ಕೆ ಬಂದಿತ್ತು. 60 ವರ್ಷ ಆಡಳಿತ ಮಾಡಿದ ಪಕ್ಷ ಏನು ಮಾಡಿತು. ಅಂತಹ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಘೋಷಿಸಿ ತನ್ನ ಜವಾಬ್ದಾರಿಯಿಂದ ವಿಮುಖವಾಯಿತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿಯವರು ಕಿಡಿಕಾರಿದ್ದಾರೆ.
ನಕ್ಸಲಿಸಂ ದೇಶದಲ್ಲಿ ಇತಿಹಾಸವಾಗಲಿದೆ. 50 ನಕ್ಸಲೀಯರು ಶರಣಾಗುವುದು ಹಿಂಸಾಚಾರದ ಹಾದಿಯನ್ನು ತೊರೆದಿರುವುದು ಸಂತೋಷದ ಸಂಗತಿ. ಹಿಂಸೆ ಮತ್ತು ಶಸ್ತ್ರಾಸ್ತ್ರಗಳನ್ನು ತೊರೆದು ಅಭಿವೃದ್ಧಿಯ ಮುಖ್ಯ ವಾಹಿನಿಗೆ ಸೇರುವವರನ್ನು ನಾನು ಸ್ವಾಗತಿಸುತ್ತೇನೆ. ಯಾವುದೇ ನಕ್ಸಲೀಯರು ಶಸ್ತ್ರಾಸ್ತ್ರ ತೊರೆದು ಅಭಿವೃದ್ಧಿಯನ್ನು ಅಳವಡಿಸಿಕೊಂಡರೆ ಅವರಿಗೆ ಪುನರ್ ವಸತಿ ಕಲ್ಪಿಸಲಾಗುವುದು ಎಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಬರೆದುಕೊಂಡಿದ್ದಾರೆ.
ಉಳಿದ ಎಲ್ಲರೂ ಶಸ್ತ್ರ ತ್ಯಜಿಸಿ ಮುಖ್ಯ ವಾಹಿನಿಗೆ ಬರಬೇಕು. ನಕ್ಸಲಿಸಂ ದೇಶದಲ್ಲಿ ಕೇವಲ ಇತಿಹಾಸವಾಗಲಿದೆ. ಇದು ನಮ್ಮ ನಿರ್ಣಯವಾಗಿದೆ ಎಂದು ಪುನರ್ ಉಚ್ಚರಿಸಿದ್ದಾರೆ.ಜಿಲ್ಲಾ ಪ್ರಿಸರ್ವ್ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ ಎಸ್‌ಟಿಎಫ್, ಸಿಆರ್.ಪಿಎಫ್ ಮತ್ತು ಅದರ ವಿಶೇಷ ಘಟಕ ಕೋಬ್ರಾ ನಕ್ಸಲರು ಶರಣಾಗತಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ.