Monday, May 6, 2024
Homeಬೆಂಗಳೂರುಸಾಲುಸಾಲು ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಿದ ಜನ, ತುಮಕೂರು, ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಿದ ಜನ, ತುಮಕೂರು, ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು,ಏ.26- ಇಂದಿನಿಂದ ಮೂರು ದಿನ ರಜೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿಗರು ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಳಿದ್ದಾರೆ. ಇದರಿಂದಾಗಿ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಂ ಉಂಟಾಗಿತ್ತು.

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, 8ನೇ ಮೈಲಿ ಸಮೀಪದ ಟೋಲು, ಮಾದಾವರ ಜಂಕ್ಷನ್‌, ನೆಲಮಂಗಲ ಟೋಲ್‌ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದರೆ, ಇನ್ನೂ ಮತ ಹಾಕಲು ಟೋಲ್‌ಗಳಲ್ಲೇ ಜನರು ವಾಹನಗಳಿಗಾಗಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದಿತು.

ಅದರಲ್ಲೂ ಮೈಸೂರು ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬೆಂಗಳೂರಿಗರು ಮುಗಿಬಿದ್ದಿದ್ದಾರೆ. ಮತದಾನದ ದಿನವಾದ ಇಂದು ಬೆಳಿಗ್ಗೆಯಿಂದಲೇ ನಿರಂತರವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ಹೈವೇ ಪ್ರಾರಂಭವಾಗುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಬಳಿ ಬೆಳಿಗ್ಗೆಯಿಂದ ಗಂಟೆಗಟ್ಟಲೆ ಟ್ರಾಫಿಕ್‌ ಜಾಂ ಆಗಿತ್ತು. ಕೆಂಗೇರಿ ಮೆಟ್ರೋ ನಿಲ್ದಾಣದವರೆಗೂ ಸಾಲುಗಟ್ಟಿ ವಾಹನಗಳು ನಿಂತಿದ್ದವು.

ಅದೇ ರೀತಿ ಕಣಿಮಿಣಿಕೆ ಟೋಲ್‌ ಬಳಿಯೂ ವಾಹನಗಳ ಸಂಚಾರ ಹೆಚ್ಚಾಗಿರುವುದು ಕಂಡುಬಂದಿತು. ಬೆಂಗಳೂರಿನಿಂದ ಮೈಸೂರಿನ ಕಡೆಗೆ ಸಾವಿರಾರು ಕಾರುಗಳು ನಿರಂತರವಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಚಲಿಸುತ್ತಲೇ ಇದ್ದವು. ನೋಡಿದವರಿಗೆ ಮತದಾನ ಮಾಡಿ ಹೋಗುತ್ತಿದ್ದಾರೆಯೋ, ಇಲ್ಲವೋ ಎಂಬ ಅನುಮಾನ ಮೂಡಿದ್ದೂ ಉಂಟು. ಕೆಲವರು ಬೆಳಿಗ್ಗೆ ಮತದಾನ ಮಾಡಿ ಪ್ರವಾಸಿ ಸ್ಥಳಗಳತ್ತ ತೆರಳಿದ್ದರು.

ಚುನಾವಣಾ ಕಾರ್ಯಕ್ಕೆ ಸಾರಿಗೆ ಬಸ್‌ಗಳನ್ನು ಬಳಸಿಕೊಂಡಿದ್ದರೂ ಸಹ ಮತದಾರರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಹಾಗೂ ಸಾಕಷ್ಟು ಬಿಎಂಟಿಸಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಸಂಚರಿಸುವ ಮಾರ್ಗಗಳಲ್ಲಿ ಬಿಎಂಟಿಸಿಯ 1,040 ಹೆಚ್ಚುವರಿ ಬಸ್‌ಗಳನ್ನು ಒದಗಿಸಲಾಗಿತ್ತು.

ಬೆಂಗಳೂರಿನಲ್ಲಿ ಇದ್ದ ಬಹಳಷ್ಟು ಮಂದಿ ತಮ್ಮತಮ್ಮ ಊರುಗಳಲ್ಲಿ ಮತ ಚಲಾಯಿಸಲು ಸಿಕ್ಕಸಿಕ್ಕ ವಾಹನ, ಬಸ್‌ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲದೆ, ಖಾಸಗಿ ಬಸ್ಸುಗಳಲ್ಲೂ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕೆಲವೊಂದು ಮಾರ್ಗಗಳಲ್ಲಿ ಬಸ್‌ ಸಂಖ್ಯೆ ಕಡಿಮೆ ಇದ್ದುದ್ದರಿಂದ ಬಸ್‌ನ ಟಾಪ್‌ ಮೇಲೂ ಕುಳಿತು ಪ್ರಯಾಣ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

RELATED ARTICLES

Latest News