ಚಿಕ್ಕಬಳ್ಳಾಪುರ, ಆ.18– ಐತಿಹಾಸಿಕ ಗಿರಿಧಾಮ ನಂದಿ ಬೆಟ್ಟದಲ್ಲಿ ಇತ್ತೀಚಿಗೆ ಒಂದಿಲ್ಲೊಂದು ಅವಘಡಗಳು ಉಂಟಾಗಿ ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಲೇ ಇದೆ. ವಿಶ್ವ ವಿಖ್ಯಾತ ನಂದಿ ಗಿರಿಧಾಮವು ಬಡವರ ಊಟಿ ಎಂದೇ ಪ್ರಸಿದ್ಧವಾಗಿದ್ದು , ಇಲ್ಲಿನ ವಾತಾವರಣವನ್ನು ಸವಿಯಲು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮಾತ್ರವಲ್ಲದೆ ದಕ್ಷಿಣ ಭಾರತದ ಬಹುತೇಕ ಮಂದಿ ನಂದಿ ಬೆಟ್ಟದಲ್ಲಿನ ಸೊಬಗನ್ನು ಸವಿಯಲು ಬರುತ್ತಾರೆ. ಆದರೆ, ಇಲ್ಲಿ ಇತ್ತೀಚೆಗೆ ವೀಕೆಂಡ್ ಬಂದರೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಉದ್ಭವವಾಗುತ್ತಿವೆ.
ಇಂದು ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿದ್ದರು. ಆದರೆ, ಬೆಟ್ಟದ ಅರ್ಧಭಾಗದ ರಸ್ತೆಯಲ್ಲಿ ಅಡ್ಡಲಾಗಿ ಬೃಹದಾಕಾರದ ಮರವೊಂದು ಉರುಳಿ ಬಿದ್ದಿತ್ತು. ಇದರಿಂದ ಸಂಚಾರ ಸ್ಥಗಿತಗೊಂಡಿದ್ದು, ಸೂರ್ಯೋದಯ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಪ್ರವಾಸಿಗರಿಗೆ ನಿರಾಸೆ ಉಂಟಾಗಿತ್ತು.
ಇಲ್ಲಿ ಇಂತಹ ಅವಗಢ ಇದೆ ಮೊದಲಲ್ಲ. ಕಳೆದ ಎರಡು ವರ್ಷಗಳ ಹಿಂದೆ ಜೋರು ಮಳೆಗೆ ಬೃಹದಾಕಾರದ ಬಂಡೆಯು ರಸ್ತೆಗೆ ಉರುಳಿ ರಸ್ತೆ ದುರಸ್ತಿ ಕಾರ್ಯ ನಡೆಯಲು ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಬೇಕಾಯಿತು.
ಇದೆ ಒಂದಿಲ್ಲೊಂದು ರೀತಿಯಲ್ಲಿ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಜಾಲತಾಣಗಳಲ್ಲಿ ನಂದಿಬೆಟ್ಟದ ಇತಿಹಾಸದ ಬಗ್ಗೆ ತಿಳಿದು ನೆಟ್ಟಿಗರು ಸೇರಿದಂತೆ ಸಾರ್ವಜನಿಕರು, ಪ್ರವಾಸಿಗರು ಬರುವರು. ಇಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ರಸ್ತೆ ಅಗಲೀಕರಣ ಆಗದೆ ಸಾಕಷ್ಟು ಮಂದಿ ಪರಿತಪಿಸಿ ಬಂದ ದಾರಿಗೆ ಸುಂಕ ಇಲ್ಲದಂತೆ ಹಿಂತಿರುಗಿರುವ ಪ್ರಸಂಗವೂ ಜರುಗಿದೆ.
ಇದಕ್ಕೆ ಪೂರಕ ಎಂಬಂತೆ ರಾತ್ರಿ ನಂದಿಗಿರಿಧಾಮದಲ್ಲಿ ಬಿರುಗಾಳಿ ಮಳೆಗೆ ಮರವು ಧರೆಗುರುಳಿದ್ದು , ಇಂದು ಬೆಳಗಿನ ಜಾವದಿಂದಲೇ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿ ಮುಂಜಾನೆಯ ಸೂರ್ಯೋದಯ ಕಣ್ತುಂಬಿಕೊಳ್ಳಲು ಬಂದಿದ್ದ ಪ್ರವಾಸಿಗರಿಗೆ ಉರುಳಿ ಬಿದ್ದ ಮರವು ಅಡ್ಡಿಯಾಗಿದೆ. ಮರ ಉರುಳಿ ಬಿದ್ದ ಮಾಹಿತಿ ಪಡೆದ ನಂದಿಗಿರಿಧಾಮ ಪೊಲೀಸರು ನಂದಿ ಬೆಟ್ಟದ ಸಿಬ್ಬಂದಿ ಧರೆಗುರುಳಿದ ಮರ ತೆರವು ಕಾರ್ಯಾಚರಣೆ ಮಾಡುವಲ್ಲಿ ಸಾಕಷ್ಟು ಪ್ರಯಾಸಪಟ್ಟರು.
ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿ ವೀಕೆಂಡ್‌ಗಳಲ್ಲಿ ಯಥೇಚ್ಛವಾಗಿವೆ. ಬರುವ ವಾಹನಗಳಿಂದ ಒಂದು ರೀತಿ ಕಿರಿಕಿರಿ ಅನುಭವಿಸಿದರೆ ಇಂದು ಮರ ಧರೆಗುರುಳಿ ರಸ್ತೆಗೆ ಅಡ್ಡಲಾದ ಪರಿಣಾಮ ಮತ್ತೊಂದು ರೀತಿಯಲ್ಲಿ ಕಿರಿಕಿರಿ ಅನುಭವಿಸುವಂತಾಯಿತು.
ಜಿಲ್ಲಾಡಳಿತ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ವೀಕೆಂಡ್ ದಿನಗಳಲ್ಲಿ ಸರಾಗವಾಗಿ ಬಂದು ಹೋಗುವಂತೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯೋನುಖರಾಗಿ ವ್ಯವಸ್ಥೆ ಕಲ್ಪಿಸಿದರಷ್ಟೇ ಸಾರ್ವಜನಿಕರು, ಪ್ರವಾಸಿಗರು ನಂದಿಬೆಟ್ಟದ ಸೊಬಗನ್ನು ಸವಿಯಲು ಸಾಧ್ಯವಾಗಲಿದೆ. ಈ ನಂದಿಬೆಟ್ಟದ ಐತಿಹ್ಯ ಇನ್ನಷ್ಟು ಪಸರಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನುಮುಖವಾಗುವುದೇ ಕಾದುನೋಡಬೇಕಿದೆ.