ತುಮಕೂರು,ಜ.7-ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್‌ಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತುಮಕೂರು ರಸ್ತೆಯ ಓಬಳಪುರ ಗೇಟ್ ಬಳಿ ಇಂದು ನಡೆದಿದೆ.
ಮಧುಗಿರಿ ತಾಲ್ಲೂಕಿನ ಪುರುವಾರ ಹೋಬಳಿಯ ಗುಡೇದಹಳ್ಳಿಯ ನಿವಾಸಿಗಳಾದ ಮೊಹಮ್ಮದ್ ಆಸಿಫ್ (12), ಮುಮ್ತಾಜ್ (38) ಮತ್ತು ಶಾಖೀರ್ ಹುಸೇನ್ (48) ಮೃತಪಟ್ಟ ದುರ್ದೈವಿಗಳು.
ಇಂದು ಬೆಳಗ್ಗೆ ತುಮಕೂರಿನಿಂದ ದ್ವಿಚಕ್ರ ವಾಹನದಲ್ಲಿ ಗುಡ್ಡೇನಹಳ್ಳಿಗೆ ಹೋಗುತ್ತಿದ್ದಾಗ ದಟ್ಟ ಮಂಜಿನಿಂದ ರಸ್ತೆಬದಿ ನಿಂತಿದ್ದ ಟ್ರಾಕ್ಟರ್ ಟ್ರೈಲರ್ ಕಾಣದೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಮೂವರಿಗೂ ಸಹ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ಕುಮಾರ್, ತುಮಕೂರುನಗರ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ಕೋರಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.