ನವದೆಹಲಿ,ಮೇ23- ಗಾಂಧಿ ಕುಟುಂಬದ ಬುಡವನ್ನೇ ಅಲುಗಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರು ಯಂಗ್ ಇಂಡಿಯಾಗೆ 2.50 ಕೋಟಿ ರೂ. ದೇಣಿಗೆ ನೀಡಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
ಇದು ಡಿ.ಕೆ.ಶಿವಕುಮಾರ್ ರಾಜಕೀಯ ಭವಿಷ್ಯಕ್ಕೆ ದೊಡ್ಡ ಕಂಟಕವಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿನಿರ್ದೇಶನಾಲಯ(ಇ.ಡಿ) ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ(ಚಾರ್ಜ್‌ಶೀಟ್) ಸಲ್ಲಿಸಿದೆ.ಇ.ಡಿ ಪರ ವಿಶೇಷ ವಕೀಲ ಜೋಯಬ್ ಹುಸೇನ್ ಅವರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದರಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಡಿ.ಕೆ ಸಹೋದರರು ನ್ಯಾಷನಲ್ ಹೆರಾಲ್‌್ಡ ಒಡೆತನದ ಯಂಗ್ ಇಂಡಿಯಾ ಲಿಮಿಟೆಡ್‌ಗೆ ಹೈಕಮಾಂಡ್ ನಿರ್ದೇಶನದಂತೆ ಎರುಡೂವರೆ ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಇದೇ ರೀತಿ ತೆಲಂಗಾಣ ಮುಖ್ಯಮಂತ್ರಿ ಕೂಡ ಯಂಗ್ ಇಂಡಿಯಾಕ್ಕೆ 80 ಲಕ್ಷ ರೂ. ದೇಣಿಗೆಯನ್ನು ಕೊಟ್ಟಿದ್ದಾರೆ. ಇದು ಎಐಸಿಸಿ ನಿರ್ದೇಶನದಂತೆ ನಡೆದಿದೆ ಎಂದು ಹೇಳಿದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಸಹೋದರರು ಇ.ಡಿ ವಿಚಾರಣೆಯನ್ನು ಎದುರಿಸಿದ್ದರು. ವಿಶೇಷವೆಂದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದ ಇ.ಡಿ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇವರ 142 ಕೋಟಿ ಆದಾಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.ಇದೀಗ ಈ ಪ್ರಕರಣವು ರೇವಂತ್ ರೆಡ್ಡಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸಹೋದರರ ಬುಡಕ್ಕೆ ಬಂದಿರುವುದರಿಂದ ಇನ್ನು ಯಾರ್ಯಾರ ಕುತ್ತಿಗೆಗೆ ಉರುಳಾಗಿದೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಏನಿದು ಪ್ರಕರಣ? :
ನ್ಯಾಷನಲ್ ಹೆರಾಲ್ಡ್ 1938ರಲ್ಲಿ ಜವಾಹರಲಾಲ್ ನೆಹರು ಸ್ಥಾಪಿಸಿದ ಪತ್ರಿಕೆಯಾಗಿದೆ. 2012ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಈ ಪತ್ರಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್‌್ಸ ಲಿಮಿಟೆಡ್ (ಎಜೆಎಲ್) ಕಂಪನಿಯಲ್ಲಿ ಹಣದ ಅಕ್ರಮ ವರ್ಗಾವಣೆಯನ್ನು ಜಾರಿ ನಿರ್ದೇಶನಾಲಯ ಗುರುತಿಸಿದೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಂಬಂಧ ಹೊಂದಿರುವ ಯಂಗ್ ಇಂಡಿಯಾನ್ ಖಾಸಗಿ ಕಂಪನಿಯು ಎಜೆಎಲ್ ಸಂಸ್ಥೆಗೆ ಸಂಬಂಧಿಸಿದ ಕೋಟ್ಯಂತರ ರೂ. ಮೌಲ್ಯದ ಭೂಮಿಯನ್ನು ಕೇವಲ 50 ಲಕ್ಷ ರೂ.ಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ವೈಐಎಲ್‌ನಲ್ಲಿ ರಾಹುಲ್ ಗಾಂಧಿ ಶೇ.38ರಷ್ಟು ಮತ್ತು ಸೋನಿಯಾ ಶೇ.38ರಷ್ಟು ಷೇರುಗಳನ್ನು ಹೊಂದಿದ್ದಾರೆ.ಎಜೆಎಲ್‌ನ ಶೇ.99ರಷ್ಟು ಷೇರುಗಳನ್ನು ಯಂಗ್ ಇಂಡಿಯಾನ್ ಲಿಮಿಟೆಡ್‌ಗೆ ವರ್ಗಾಯಿಸಲಾಗಿದೆ. ಈ ವಹಿವಾಟು ಹಣ ಅಕ್ರಮ ವರ್ಗಾವಣೆಯ ಭಾಗವಾಗಿದೆ ಎಂಬುದು ಇಡಿಯ ಪ್ರಮುಖ ಆರೋಪವಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ, 2021ರಲ್ಲಿ ಅಧಿಕೃತವಾಗಿ ತನಿಖೆ ಆರಂಭಿಸಿತು. 2025ರ ಏಪ್ರಿಲ್ 9ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4ರಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಇ.ಡಿ ಸೋನಿಯಾ ಗಾಂಧಿ ಅವರನ್ನು ಎ1 ಮತ್ತು ರಾಹುಲ್ ಗಾಂಧಿ ಅವರನ್ನು ಎ2 ಎಂದು ಹೆಸರಿಸಿದೆ. ಸ್ಯಾಮ್ ಪಿತ್ರೋಡಾ ಮತ್ತು ಸುಮನ್ ದುಬೆ ಅವರಂತಹ ಕಾಂಗ್ರೆಸ್ ನಾಯಕರು ಕೂಡ ಆರೋಪಿಗಳಾಗಿದ್ದಾರೆ.
ನ್ಯಾಷನಲ್ ಹೆರಾಲ್‌್ಡ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಮತ್ತು ರಾಹುಲ್ ಆಪ್ತ, ಪತ್ರಕರ್ತ ಸುಮನ್ ದುಬೆ ಅವರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಇ.ಡಿ ಹೇಳುತ್ತಿರುವುದೇನು?
ಸುಬ್ರಮಣಿಯನ್ ಸ್ವಾಮಿ ಅವರ ದೂರನ್ನು ಪಟಿಯಾಲಾ ಹೌಸ್‌ನ ಮೆಟ್ರೊಪಾಲಿಟನ್ ನ್ಯಾಯಾಧೀಶರು 2014ರ ಜೂನ್ 26ರಂದು ಪರಿಗಣನೆಗೆ ತೆಗೆದುಕೊಂಡರು. ಈ ಬಗ್ಗೆ ಜಾರಿ ನಿರ್ದೇಶನಾಲಯವು 2021ರಲ್ಲಿ ತನಿಖೆ ಆರಂಭಿಸಿತು. ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರು ಒಂದನೇ ಆರೋಪಿಯಾಗಿದ್ದರೆ, ರಾಹುಲ್ ಗಾಂಧಿ ಅವರು ಎರಡನೇ ಆರೋಪಿ ಆಗಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯವು ಪ್ರಕರಣದ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು 2022ರಲ್ಲಿ ದೀರ್ಘ ವಿಚಾರಣೆಗೆ ಒಳಪಡಿಸಿತ್ತು.
ಅಸೋಸಿಯೇಟೆಡ್ ಜರ್ನಲ್‌್ಸ ಲಿಮಿಟೆಡ್‌ನ (ಎಜೆಎಲ್) ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವ ಸಲುವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ ಮತ್ತು ಇತರ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ; ಯಂಗ್ ಇಂಡಿಯನ್ ಲಿಮಿಟೆಡ್ ಮೂಲಕ, 2,000 ಕೋಟಿ ಮೌಲ್ಯದ ಆಸ್ತಿಯನ್ನು ಸೋನಿಯಾ ಮತ್ತು ರಾಹುಲ್ ಅವರು ಕೇವಲ 50 ಲಕ್ಷ ರೂ. ಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ ನೀಡಿದ್ದ 90.2 ಕೋಟಿ ಸಾಲವನ್ನು 9.02 ಕೋಟಿಯ ಈಕ್ವಿಟಿ ಷೇರುಗಳನ್ನಾಗಿ ಪರಿವರ್ತಿಸಿ ಯಂಗ್ ಇಂಡಿಯಾನ್‌ಗೆ ವರ್ಗಾಯಿಸಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ನ್ಯಾಷನಲ್ ಹೆರಾಲ್ಡ್:
1937ರಲ್ಲಿ ಜವಾಹರಲಾಲ್ ನೆಹರೂ ಅವರು ಸ್ಥಾಪಿಸಿದ ಕಂಪನಿ ಇದು. 5,000 ಸ್ವಾತಂತ್ರ್ಯ ಹೋರಾಟಗಾರರು ಈ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದರು. ಕಂಪನಿಯು ನಿರ್ದಿಷ್ಟ ವ್ಯಕ್ತಿಗೆ ಸೇರಿರಲಿಲ್ಲ. 2010ರ ವೇಳೆಗೆ ಅದು 1,057 ಷೇರುದಾರರನ್ನು ಹೊಂದಿತ್ತು. ಎಜೆಎಲ್ ನ್ಯಾಷನಲ್ ಹೆರಾಲ್ಡ್ ಎಂಬ ಇಂಗ್ಲಿಷ್ ಪತ್ರಿಕೆ, ಕೌಮೀ ಆವಾಜ್ ಎಂಬ ಉರ್ದು ಪತ್ರಿಕೆ ಮತ್ತು ನವಜೀವನ್ ಎಂಬ ಹಿಂದಿ ಪತ್ರಿಕೆಗಳನ್ನು 2008ರವರೆಗೂ ಪ್ರಕಟಿಸುತ್ತಾ ಬಂದಿತ್ತು. ನಷ್ಟ ಅನುಭವಿಸಿದ ಕಾರಣಕ್ಕೆ ನಂತರ ಪತ್ರಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಕಂಪನಿಯು ದೆಹಲಿ, ಮುಂಬೈ ಮತ್ತು ಲಖನೌಗಳಲ್ಲಿ ಸ್ವಂತ ಆಸ್ತಿಗಳನ್ನು ಹೊಂದಿತ್ತು. 2011ರಲ್ಲಿ ಕಂಪನಿಯ ಮಾಲೀಕತ್ವವನ್ನು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಗಾವಣೆ ಮಾಡಲಾಗಿತ್ತು. ಮೂರೂ ಪತ್ರಿಕೆಗಳ್ನು ಪುನರಾರಂಭಿಸಲು ಎಜೆಎಲ್ 2016ರಲ್ಲಿ ನಿರ್ಧರಿಸಿತ್ತು.
ಆಸ್ತಿ ಮುಟ್ಟುಗೋಲು :
ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಅಸೋಸಿಯೇಟೆಡ್ ಜರ್ನಲ್‌್ಸ ಲಿಮಿಟೆಡ್‌ಗೆ ಸೇರಿದ ದೆಹಲಿ, ಮುಂಬೈ ಮತ್ತು ಲಖನೌಗಳಲ್ಲಿರುವ 661 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು 90.2 ಕೋಟಿ ಮೌಲ್ಯದ ಎಜೆಎಲ್ ಷೇರುಗಳನ್ನು 2023ರ ನವೆಂಬರ್ 20ರಂದು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಇ.ಡಿ ಆರಂಭಿಸಿದೆ.
ದೆಹಲಿ, ಮುಂಬೈ ಮತ್ತು ಲಖನೌದ ನೋಂದಣಾಧಿಕಾರಿಗಳಿಗೆ ನೋಟೀಸ್ ನೀಡಿದೆ. ಅಲ್ಲದೇ, ಮುಂಬೈನ ಬಾಂದ್ರಾದಲ್ಲಿರುವ (ಪೂರ್ವ) ಎಜೆಎಲ್‌ಗೆ ಸೇರಿದ ಕಟ್ಟಡದಲ್ಲಿ (ಹೆರಾಲ್‌್ಡ ಹೌಸ್) ಕಾರ್ಯಾಚರಿಸುತ್ತಿರುವ ಎಂ/ಎಸ್ ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಟ್‌್ಸ ಲಿಮಿಟೆಡ್ ಕಂಪನಿಗೂ ನೋಟೀಸ್ ನೀಡಿ, ಕಟ್ಟಡದ ಬಾಡಿಗೆ/ಗುತ್ತಿಗೆ ಮೊತ್ತವನ್ನು ಪ್ರತಿ ತಿಂಗಳು ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ.