ಬೆಂಗಳೂರು,ಏ.4– ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಕರೆ ಮಾಡಿ ನಿಮಗೆ ಸೇರಿದ ಹನಿಟ್ರ್ಯಾಪ್ ವಿಡಿಯೋವಿದೆ ಎಂದು ಬೆದರಿಸಿ ಎರಡು ಕೋಟಿಯ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹೋಟೆಲ್ ನಡೆಸುತ್ತಿದ್ದ ಅಜಯ್ ಹಾಗೂ ಈತನ ಸಹಚರ ಅಭಿ ಬಂಧಿತರು.
ಹೋಟೆಲ್‌ನಲ್ಲಿ ನಷ್ಟ ಉಂಟಾದ ಪರಿಣಾಮ ಹಣಕ್ಕಾಗಿ ಅನ್ಯದಾರಿಯನ್ನು ಹುಡುಕಿದ ಅಜಯ್ ನಿವೃತ್ತ ಎಂಜಿನಿಯರ್ ಬಳಿ ಹಣವಿದೆ ಎಂದು ಭಾವಿಸಿ ಸಹಚರ ಅಭಿ ಹಾಗೂ ಕಾರು ಚಾಲಕನೊಂದಿಗೆ ಸೇರಿಕೊಂಡು 68 ವರ್ಷದ ನಿವೃತ್ತ ಎಂಜಿನಿಯರ್‌ಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಕರೆ ಮಾಡಿದ್ದಾರೆ.
ನೀವು 25 ವರ್ಷದ ಯುವತಿಯೊಂದಿಗೆ ಇರುವ ವಿಡಿಯೋ ನಮ ಬಳಿ ಇದೆ. ನೀವು 2 ಕೋಟಿ ಹಣ ಕೊಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾರೆ.
ಇದರಿಂದ ಗಾಭರಿಗೊಂಡ ನಿವೃತ್ತ ಇಂಜಿನಿಯರ್ ನಾನು ಆ ವಿಡಿಯೋವನ್ನು ನೋಡಬೇಕೆಂದು ಹೇಳಿದಾಗ ಕೋರಮಂಗಲದಲ್ಲಿನ ಕಾಫಿ ಬಾರ್‌ಯೊಂದಕ್ಕೆ ಬರುವಂತೆ ತಿಳಿಸಿದ್ದಾರೆ.ಅವರು ಕಾಫಿಬಾರ್‌ಗೆ ಹೋದಾಗ ಯಾವುದೋ ವಿಡಿಯೋ ತೋರಿಸಿದ್ದಾರೆ. ಇದು ತಮದಲ್ಲ ಎಂದು ಹೇಳಿದರೂ ಬಿಡದೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸಿ ಮೊದಲು 48 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ.
ಈ ಯುವಕರ ವರ್ತನೆಯಿಂದ ಬೇಸರಗೊಂಡ ಅವರು ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿ ಇಬ್ಬರನ್ನು ಬಂಧಿಸಿ ತಲೆಮಸಿಕೊಂಡಿರುವ ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.