ಚಿಕ್ಕಮಗಳೂರು,ಅ.10- ಪ್ರೆಸ್ ನಾಮಫಲಕ ಹೊಂದಿದ್ದ ಬೈಕ್‌ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ನಕಲಿ ಪತ್ರಕರ್ತ ಸೇರಿ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, 15 ಸಾವಿರ ರೂ. ಮೌಲ್ಯದ 1.129 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.ಎಚ್.ಆರ್.ಮನ್ಸೂರ್ (48) ಹಾಗೂ ಹ್ಯಾಂಡ್ ಪೋಸ್ಟ್ ನಿವಾಸಿ ಎಂ.ಕೆ.ಯೂಸೂಫ್ ಎಂಬುವವರನ್ನು ಬಂಧಿತ ಆರೋಪಿಗಳು.
ಹಂಡುಗುಳಿ ಸಮೀಪದ ನವಗ್ರಾಮದ ಬಳಿ ಬೈಕ್‌ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ಬೈಕನ್ನು ತಡೆದು ಪರಿಶೀಲಿಸಿದಾಗ ಶ್ರೀಗಂಧದ 8 ತುಂಡುಗಳು ಪತ್ತೆಯಾಗಿವೆೆ. ಈ ವೇಳೆ ಆರೋಪಿಗಳಿಬ್ಬರು ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನಕಲಿ ಪತ್ರಕರ್ತ: ಶ್ರೀಗಂಧ ಸಾಗಿಸಿ ಬಂಧನಕೊಳ್ಳಗಾಗಿರುವ ಆರೋಪಿ ಎಚ್.ಆರ್.ಮನ್ಸೂರ್ ಎಂಬಾತ ಹಾಸನದ ಸ್ಥಳಿಯ ಪತ್ರಿಕೆಯೊಂದರ ವರದಿಗಾರನೆಂದು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸುತ್ತಿದ್ದ ಆರೋಪಗಳು ಕೇಳಿ ಬಂದಿದ್ದವು.ಪತ್ರಕರ್ತನಲ್ಲದಿದ್ದರೂ ತಾಲೂಕು ಪತ್ರಕರ್ತರ ಸಂಘದಲ್ಲಿ ಗುರುತಿಸಿಕೊಂಡಿದ್ದ, ಆತನ ದಂಧೆಯ ಬಗ್ಗೆ ತಿಳಿದುಕೊಂಡ ಪತ್ರಕರ್ತರ ಸಂಘದ ಪ್ರತಿನಿಧಿಗಳು ಆತನನ್ನು ಕಳೆದವಾರ ಸಂಘದಿಂದ ಹೊರ ಹಾಕಿದ್ದರು.
ಆತನ ಕಾರು ಮತ್ತು ಬೈಕ್‌ಗೆ ಪ್ರೆಸ್ ಎಂದು ಬರೆಸಿಕೊಂಡಿದ್ದ ಅದೇ ಬೈಕ್‌ನಲ್ಲಿ ಶ್ರೀಗಂಧವನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಿ.ಮಂಜುನಾಥ್, ಡಿಆರ್ ಎಫ್‌ಓ ಅಶ್ವಥ್, ಸಿಬ್ಬಂದಿ ಜೆ.ಜಿ.ಉಮೇಶ್, ಎ.ಎಸ್.ಸುರೇಶ್, ಸುಮಂತ್ ನವರಾಜ್ ಇದ್ದರು.