ಬೆಂಗಳೂರು,ಜು.19– ಮನೆಯ ಹೊರಗೆ ಇದ್ದಂತಹ ಬೆಲೆ ಬಾಳುವ ಶೂಗಳನ್ನು ಕಳವು ಮಾಡಿ ನಗರದ ಸಂಡೆಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದಲ್ಲದೆ ಊಟಿ, ಕೆಡೈಕೆನಲ್‌ಗೂ ಕಳುಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಇಬ್ಬರು ಆರೋಪಿಗಳನ್ನು ಬಂಧಿಸಿ 10.72 ಲಕ್ಷ ರೂ. ಮೌಲ್ಯದ ಗ್ಯಾಸ್ ಸಿಲಿಂಡರ್, ವಾಹನದ ಬ್ಯಾಟರಿ ಹಾಗೂ 715 ಜೊತೆ ಶೂಗಳನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬಿ.ಇ.ಎಲ್ ಲೇಔಟ್‌ನ ಮನೆಯೊಂದರ ಗೇಟ್ ಬಳಿ ಇರಿಸಿದ್ದ 2 ಗ್ಯಾಸ್ ಸಿಲಿಂಡರ್ ಹಾಗೂ 4 ಜೊತೆ ಬೆಲೆಬಾಳುವ ಶೂಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸಿ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಕ್ಯಾಮೆರಾವನ್ನು ಪರಿಶೀಲಿಸಿ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಬಿ.ಇ.ಎಲ್ ಲೇಔಟ್‌ನ 5ನೇ ಬ್ಲಾಕ್‌ನಲ್ಲಿ ಇಬ್ಬರು ಆರೋಪಿಗಳನ್ನು ಆಟೋ ರಿಕ್ಷಾ ಸಮೇತ ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಮನೆ ಮುಂದೆ ಇದ್ದಂತಹ ಸಿಲಿಂಡರ್, ಬೆಲೆ ಬಾಳುವ ಶೂಗಳನ್ನು ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಕದ್ದ ವಸ್ತುಗಳನ್ನು ಮನೆಯಲ್ಲಿ ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಅವರು ವಾಸವಿರುವ ಮನೆಯಿಂದ 10.72 ಲಕ್ಷ ರೂ. ಮೌಲ್ಯದ 715 ಜೊತೆ ಬೆಲೆಬಾಳುವ ಶೂಗಳು, 2 ಗ್ಯಾಸ್ ಸಿಲಿಂಡರ್, ಒಂದು ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ.