ಚಿಕ್ಕಮಗಳೂರು, ಮಾ.17- ಪ್ರವಾಸಕ್ಕೆ ಬಂದಿದ್ದ ರಾಜಸ್ತಾನಿ ಯುವಕರ ಪೈಕಿ ಇಬ್ಬರು ಭದ್ರಾನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ. ಭದ್ರಾನದಿಯ ವಸಿಷ್ಠಾಶ್ರಮದ ಸಂಜೀವ ಮೆಟ್ಟಿಲಿನ ತೂಗುಸೇತುವೆ ಬಳಿ ದುರ್ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ರಾಜಸ್ತಾನ ಮೂಲದ ಯುವಕರಾದ ಜಗದೀಶ್ (33) ಮತ್ತು ಚೋಟಾ ಸಿಂಗ್ (28) ಮೃತಪಟ್ಟಿದ್ದಾರೆ.
ಹೋಳಿ ಹಬ್ಬ ರಜೆ ಹಿನ್ನಲೆ 12 ಜನ ಯುವಕರು ಎರಡು ಕಾರಿನಲ್ಲಿ ಕಳಸಕ್ಕೆ ಬಂದಿದ್ದರು.
ಕಳಸ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ ಯುವಕರು ನಿನ್ನೆ ಬೆಂಗಳೂರಿಗೆ ಮರಳುವ ಮೊದಲು ವಿಶಿಸ್ಥಾಶ್ರಮದ ತೂಗು ಸೇತುವೆ ನೋಡಲು ತೆರಳಿದ್ದರು. 10 ಜನ ಸ್ನೇಹಿತರು ತೂಗು ಸೇತುವೆ ನೋಡಲು ತೆರಳಿದ್ದ ವೇಳೆ ಇಬ್ಬರು ಯುವಕರು ನೀರಿನಲ್ಲಿ ಈಜಾಡಲು ತೆರಳಿದ್ದಾರೆ.
ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಳುಗುತಜ್ಞ ಭಾಸ್ಕರ್ ನೆರವಿನಿಂದ ಇಬ್ಬರ ಮೃತದೇಹವನ್ನು ಹೊರತಗೆಯಲಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟವಾಡಲೆಂದು ಕೆರೆಗೆ ಇಳಿದ ಬಾಲಕಿಯೊಬ್ಬಳು ನೀರಿಲ್ಲಿ ಮುಳುಗಿ ಸಾವು :
ಆಟವಾಡಲೆಂದು ಕೆರೆಗೆ ಇಳಿದ ಬಾಲಕಿಯೊಬ್ಬಳು ನೀರಿಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಅತ್ತೂರು ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ಕಾಫಿ ಬೆಳೆಗಾರ ಕೆ.ಕೆ.ತಿಮ್ಮಯ್ಯ ಎಂಬುವವರಿಗೆ ಸೇರಿದ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಾಫಿ ಬೆಳೆಗಾರ ಕೆ.ಕೆ.ತಿಮ್ಮಯ್ಯ ಎಂಬುವವರಿಗೆ ಸೇರಿದ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತೋಟದ ಕಾರ್ಮಿಕರಾಗಿರುವ ಭವಾನಿ ಎಂಬುವವರ ಪುತ್ರಿ ಮೃತ ದುರ್ದೈವಿ.
ತನ್ನ ಸಹಪಾಠಿಗಳೊಂದಿಗೆ ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಈಕೆ ಹಾಗೂ ಇನ್ನಿಬ್ಬರು ಮಕ್ಕಳು ಕೆರೆಗೆ ಹಾರಿದ್ದರು. ಆದರೆ ಕೆರೆಯಲ್ಲಿ ನೀರು ಬತ್ತಿ ಕೆಸರು ತುಂಬಿದ್ದರಿಂದ ಮೂವರು ಅದರೊಳಗೆ ಸಿಲುಕಿ ಕಿರುಚಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಮಿಕರು ಇಬ್ಬರನ್ನು ರಕ್ಷಿಸಿದ್ದರು. ಆದರೆ ಒಬ್ಬಾಕೆ ಕೆಸರಿನಲ್ಲೇ ಸಿಲುಕಿ ಅಸುನೀಗಿದ್ದಾಳೆ ಎನ್ನಲಾಗಿದೆ.
ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಆಗಿರುವ ಮೃತ ಬಾಲಕಿ ನಾಳೆ ವಾರ್ಷಿಕ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಬಾಲಕಿಯು ವಿಧಿಯೊಡ್ಡಿದ ಪರೀಕ್ಷೆಗೆ ಬಲಿಯಾಗಿರುವುದು ಶೋಚನೀಯವಾಗಿದೆ. ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.