Friday, November 22, 2024
Homeರಾಜ್ಯಮರಿತಿಬ್ಬೇಗೌಡ ಸೇರಿ ಜೆಡಿಎಸ್ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ

ಮರಿತಿಬ್ಬೇಗೌಡ ಸೇರಿ ಜೆಡಿಎಸ್ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು,ಮಾ.22- ವಿಧಾನಪರಿಷತ್ ಸ್ಥಾನಕ್ಕೆ ನಿನ್ನೆಯಷ್ಟೇ ರಾಜೀನಾಮೆ ನೀಡಿದ ಮರಿತಿಬ್ಬೇಗೌಡ ಸೇರಿದಂತೆ ಜೆಡಿಎಸ್ನ ಇಬ್ಬರು ಮಾಜಿ ಶಾಸಕರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರಾಗಿದ್ದ ನಾಗಮಂಗಲದ ಅಪ್ಪಾಜಿಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ಬಿಜೆಪಿಯ ಬಿಬಿಎಂಪಿ ಮಾಜಿ ಸದಸ್ಯ ಆಶಾ ಸುರೇಶ್ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ, ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಎಂ.ಶ್ರೀನಿವಾಸ್ ವಿಧಾನಸಭೆಯಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದರು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿಲ್ಲ. ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಪತ್ರ ಕಳುಹಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಅವರನ್ನೂ ಸೇರಿಸಿಕೊಳ್ಳಲಾಗಿದೆ. ಅವರ ಬೆಂಬಲಿಗರು, ಅಳಿಯ ಹಾಗೂ ಇತರರು ಇಂದು ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದರು.

ಬಿಬಿಎಂಪಿ ಆಶಾ ಸುರೇಶ್ ತಮ್ಮ ಸಂಬಂಧಿಯಾಗಿದ್ದು, ಅವರನ್ನು ಶಾಸಕರನ್ನಾಗಿ ಮಾಡಲು ನಾವು ಪ್ರಯತ್ನ ಪಟ್ಟೆವು. ಆದರೆ ಹಳಿ ತಪ್ಪಿತ್ತು. ಈಗ ಅವರು ಪಕ್ಷಕ್ಕೆ ಮರಳಿದ್ದಾರೆ ಎಂದರು.ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ತಮ್ಮ ಪಕ್ಷದ ಒಬ್ಬೊಬ್ಬರೇ ಮುಖಂಡರನ್ನು ನಮ್ಮ ಪಕ್ಷಕ್ಕೆ ಕಳುಹಿಸುತ್ತಿದ್ದಾರೆ. ಇಂದು ಆಶಾ ಸುರೇಶ್, ಸುರೇಶ್, ರಮೇಶ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಡಿ.ಕೆ.ಸುರೇಶ್ರನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮರಿತಿಬ್ಬೇಗೌಡ ಅವರು ಜೆಡಿಎಸ್ಗೆ ಆಧಾರ ಸ್ತಂಭದಂತಿದ್ದರು. ಪಕ್ಷದ ಮೂಲಸ್ತಂಭವಾಗಿದ್ದ ಅವರು ಕಾಂಗ್ರೆಸ್ಗೆ ಸೇರಿದ್ದರಿಂದ ನಮ್ಮ ಬಲ ಹೆಚ್ಚಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.ಇದೇ ವೇಳೆ ಮಾತನಾಡಿದ ಮರಿತಿಬ್ಬೇಗೌಡ, ನಾನು 2000 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಬೆಂಗಳೂರು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯನಾಗಿದ್ದೆ. 2006 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೆ. 3 ಮತ್ತು 4 ನೇ ಬಾರಿ ಜೆಡಿಎಸ್ ಪಕ್ಷ ನನಗೆ ಟಿಕೆಟ್ ಕೊಟ್ಟು ಬೆಂಬಲ ನೀಡಿತ್ತು ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಅಭ್ಯರ್ಥಿ ಮಾಡುವುದು ಬೇಡ ಎಂದು ನಾನು ಹೇಳಿದ್ದಕ್ಕಾಗಿ ಜೆಡಿಎಸ್ ನಾಯಕರು ನನ್ನ ವಿರುದ್ಧ ಅಸಮಾಧಾನಗೊಂಡಿದ್ದರು. ಆ ಪಕ್ಷದಲ್ಲಿ ಕಾರ್ಯಕರ್ತರ ಅಭಿಪ್ರಾಯಗಳಿಗೆ, ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲವಾಗಿದೆ. ಕುಟುಂಬದ ನಿರ್ಧಾರಗಳೇ ಪ್ರಮುಖವಾಗಿರುತ್ತವೆ. ಕಾರ್ಯಕರ್ತರ ಮಾತುಗಳನ್ನು ಕೇಳುತ್ತಿಲ್ಲ ಎಂದು ಟೀಕಿಸಿದರು.

ಶಾಸನ ಸಭೆಯಲ್ಲಿ ನಾನು ವಿಷಯಾಧಾರಿತವಾಗಿ ಚರ್ಚೆ ಮಾಡಿದ್ದೇನೆ. ರೈತರ ಮಕ್ಕಳು ಎಂದು ಹೇಳಿಕೊಳ್ಳುವವರು ಎಪಿಎಂಸಿ ಬಿಲ್ಲನ್ನು ವಿಧಾನಪರಿಷತ್ನಲ್ಲಿ ಸೋಲಿಸಿದರು. ನಾನು ಆತ್ಮಸಾಕ್ಷಿಯಿಂದ ಮತ ಹಾಕಿದ್ದೆ ಎಂದು ಹೇಳಿದರು. ರಾಜ್ಯ ಸರ್ಕಾರದ ರೈತಪರ ಯೋಜನೆಯಿಂದ ಪ್ರೇರಿತನಾಗಿ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದರು.

RELATED ARTICLES

Latest News