ಹಾಸನ,ಫೆ.3- ಕೆರೆಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಂತ್‌ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಮೃತಪಟ್ಟ ಯುವಕರು. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಸ್ನೇಹಿತರಾಗಿದ್ದರು.
ಈಜು ಕಲಿತಿದ್ದ ಇಬ್ಬರು ಸ್ನೇಹಿತರು ನಿನ್ನೆ ಕೆಲಸ ಮುಗಿಸಿ ಕೆರೆಗೆ ಈಜಲು ತೆರಳಿದ್ದರು. ಮೊದಲು ಕೆರೆಗೆ ಧುಮುಕಿದ್ದ ರೋಹಿತ್‌ಗೆ ಕೆರೆಯಲ್ಲಿ ಬೆಳೆದಿದ್ದ ಮುಳ್ಳು, ಗಿಡಗೆಂಟೆಗಳು ಹಾಗೂ ಬಳ್ಳಿಗಳು ರೋಹಿತ್ ಕಾಲಿಗೆ ಸುತ್ತಿಕೊಂಡಿದೆ.
ಇದರಿಂದ ಮೇಲೆ ಬರಲಾಗದೆ ಕಾಪಾಡಿ ಎಂದು ಕಿರುಚಾಡಿದಾಗ, ಗೆಳೆಯನನ್ನು ರಕ್ಷಿಸಲು ಯಶ್ವಂತ್‌ಸಿಂಗ್ ಕೆರೆಗೆ ಜಿಗಿದಿದ್ದಾನೆ. ಗಿಡಗೆಂಟೆಗಳ ನಡುವೆ ಆತನೂ ಸಿಲುಕಿಕೊಂಡಿದ್ದಾನೆ. ಕೊನೆಗೆ ಇಬ್ಬರು ನೀರಿನಲ್ಲೆ ಮುಳಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ತಡರಾತ್ರಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಸಂಬಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.