ಬೆಂಗಳೂರು, ಮೇ 24- ರಾಜ್ಯಾದ್ಯಂತ ಪೂರ್ವ ಮುಂಗಾರಿನ ಮಳೆಯಬ್ಬರ ಮುಂದುವರೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಸಿಡಿಲಿಗೆ ಸಿಲುಕಿ ಇಬ್ಬರು ಬಲಿಯಾಗಿ, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದಲೂ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರಾಯಭಾಗ ಪಟ್ಟಣದ ಜಮೀನೊಂದರಲ್ಲಿ ಕಬ್ಬು ನಾಟಿ ಮಾಡುವಾಗ ಸಿಡಿಲು ಬಡಿದು ಶೋಭಾ ಕೃಷ್ಣ ಕುಲಗೋಡೆ (45) ಎಂಬ ಮಹಿಳೆ ಮೃತಪಟ್ಟರೆ, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ರಾಯಭಾಗ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ಕೂಡಲೇ ರಾಯಭಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮತ್ತೊಂದು ಘಟನೆಯಲ್ಲಿ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಗುರು ಪುಂಡಲೀಕ (35) ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಭಾರಿ ಮಳೆ ಬಂದಿದ್ದು, ಈ ವೇಳೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಈ ಘಟನೆ ಸಂಭವಿಸಿದೆ.ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲಬ್ಬರಕ್ಕೆ 12 ಕುರಿಗಳು ನಿಧನ ಹೊಂದಿವೆ.
ಯಾದಗಿರಿ ಜಿಲ್ಲೆಯಾದ್ಯಂತ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ನಗರದಲ್ಲಿ ನೂರಾರು ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಪಟ್ಟಣದ ಮಾತಾ ಮಾಣಿಕೇಶ್ವರಿ ಬಡಾವಣೆಯಲ್ಲಿ ಮನೆಯ ಮೇಲ್ಛಾವಣಿ ಹಾರಿಹೋಗಿದೆ.ವಿದ್ಯುತ್ ಕಂಬಗಳು ಉರುಳಿಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡು ರಾತ್ರಿಯಿಡೀ ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು.
ಯಾದಗಿರಿ ಪಿಡಬ್ಲ್ಯೂಡಿ ಕಚೇರಿ ಆವರಣಕ್ಕೆ ನೀರು ನುಗ್ಗಿದ್ದು, ಕೆಸರುಗದ್ದೆಯಾಗಿ ನಿರ್ಮಾಣವಾಗಿತ್ತು.ಹುಬ್ಬಳ್ಳಿ, ಧಾರವಾಡ, ಬಿಜಾಪುರ, ರಾಯಚೂರು, ಯಾದಗಿರಿ, ಹಂಪೆ, ಕೊಪ್ಪಳ ಸೇರಿದಂತೆ ಮತ್ತಿತರೆಡೆ ಭಾರಿ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿಹರಿಯುತ್ತಿವೆ.
ಒಂದೆಡೆ ಅನ್ನದಾತರಲ್ಲಿ ಸಂತಸ ಮನೆ ಮಾಡಿದ್ದರೆ, ಮತ್ತೊಂದೆಡೆ ಮಳೆರಾಯ ಭಾರಿ ಅನಾಹುತವನ್ನೇ ಸೃಷ್ಟಿಸಿದ್ದಾನೆ. ಬೆಳೆದು ನಿಂತಿದ್ದ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.