ಕೊಡಗು, ಫೆ.13- ಕಳೆದ 12 ಗಂಟೆಯೊಳಗೆ ಜಿಲ್ಲೆಯಲ್ಲಿ ಇಬ್ಬರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಜಿಲ್ಲೆಯ ಪೊನ್ನಂ ಪೇಟೆಯ ಕುಟ್ಟಾ ಸಮೀಪ ರಾಜು(60) ಎಂಬುವರು ಹುಲಿ ದಾಳಿಗೆ ಜೀವ ಕಳೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ ರಾಜು ಅವರು ನಾಲ್ಕೇರಿ ಗ್ರಾಮದ ಪೂಣಚ್ಚ ಎಂಬುವರ ಕಾಫಿ ತೋಟದಲ್ಲಿ ಇಂದು ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಹುಲಿಯೊಂದು ಇವರ ಮೇಲೆ ದಾಳಿ ಮಾಡಿ ಕಚ್ಚಿ ಸಾಯಿಸಿದೆ.
ನಿನ್ನೆ ಸಂಜೆ ಕುಟ್ಟಾ ಗ್ರಾಮದ ಪಾಲೇರಿ ಎಂಬಲ್ಲಿ ಆಟವಾಡುತ್ತಿದ್ದ ಚೇತನ್(12) ಎಂಬಾತನ ಮೇಲೆ ಹುಲಿ ದಾಳಿ ಮಾಡಿ ತಿಂದು ಸಾಯಿಸಿದೆ. ಈ ಬಾಲಕ ಮೂಲತಃ ನಾಗರಹೊಳೆ ವಲಯ ಕೇಂದ್ರದ ಬಳಿಯ ಕೊಳಂಗೇರಿ ಹಾಡಿಯ ನಿವಾಸಿ.
ಇಂದು ಬೆಳಗ್ಗೆ ರಾಜು ಎಂಬುವರು ಹುಲಿಗೆ ಬಲಿಯಾಗಿದ್ದು, ಕಳೆದ 12 ಗಂಟೆಯೊಳಗೆ ಇಬ್ಬರು ಹುಲಿ ದಾಳಿಯಿಂದ ಸಾವನ್ನಪ್ಪಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಲಿ ದಾಳಿಯಿಂದ ಈಗಾಗಲೇ ಎರಡು ಜೀವಗಳು ಬಲಿಯಾಗಿದ್ದು, ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಹುಲಿ ದಾಳಿಯಿಂದಾಗಿ ಕಾಫಿ ತೋಟಗಳಿಗೆ ತೆರಳಲು ಜನರು ಹೆದರುತ್ತಿದ್ದಾರೆ.
ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
#TigerAttack, #TwoKilled,