ಬೆಂಗಳೂರು,ಡಿ.23– ಸಿಲಿಕಾನ್ ಸಿಟಿ ಟ್ರಾಫಿಕ್ ಕಂಟ್ರೋಲ್ ಗೆ ಹೊಸ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆ ಕುರಿತಂತೆ ದೆಹಲಿಯ ಖಾಸಗಿ ಸಂಸ್ಥೆ ನಡೆಸಿರುವ ಅಧ್ಯಯನದ ವರದಿ ಆಧರಿಸಿ ಹೊಸ ಯೋಜನೆ ಜಾರಿಗೊಳಿಸಲು ಬಿಬಿಎಂಪಿ ಸಜ್ಜಾಗಿದೆ.
ನಗರದ ವಾಹನ ದಟ್ಟಣೆ ನಿವಾರಿಸಲು 54 ಸಾವಿರ ಕೋಟಿ ರೂ.ಗಳ ಯೋಜನೆಯ ಡಿಪಿಆರ್ ಸಿದ್ದವಾಗಿದ್ದು ಅವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಅದರಲ್ಲೂ ಮುಖ್ಯವಾಗಿ ಕಳೆದ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ಮೂವರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ.
ಇದರ ಜೊತೆಗೆ ಪಾಲಿಕೆಯಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರೋ ಯೋಜನೆಗಳನ್ನು ಕ್ರೋಢಿಕರಿಸಿ ಯೋಜನೆಗಳ ವೆಚ್ಚ. ಅನುಷ್ಟಾನದ ಮಾರ್ಗ ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಒಳಗೊಂಡ ವರದಿ ಸಿದ್ದಪಡಿಸಲಾಗಿದೆ.
ಹೊಸ ಯೋಜನೆಯಲ್ಲಿ ಹಾಲಿ ಇರುವ ರಸ್ತೆ, ಜಂಕ್ಷನ್, ಇಂಟರ್ ಜಂಕ್ಷನ್ ಸಂಚಾರಕ್ಕೆ ಹಲವು ಸಲಹೆಗಳನ್ನು ನೀಡಲಾಗಿದೆ. ಮೈಸೂರು ರಸ್ತೆ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆ ಸೇರಿದಂತೆ ಪ್ರಮುಖ ಐದು ರಸ್ತೆಗಳನ್ನು ಮರು ವಿನ್ಯಾಸಗೊಳಿಸಲು ಸೂಚನೆ ನೀಡಲಾಗಿದೆ. ಅಂಡರ್ ಪಾಸ್, ಮೇಲ್ಸೆತ್ತುವೆ, ಸಂಪರ್ಕ ರಸ್ತೆಗಳನ್ನು ಮಾಡುವುದಕ್ಕೆ ಹೆಚ್ಚು ಒತ್ತು ನೀಡುವಂತೆಯೂ ವರದಿಯಲ್ಲಿ ಸಲಹೆ ನೀಡಲಾಗಿದೆ.
ಜತೆಗೆ 12 ಎಲಿವೇಟೆಡ್ ಕಾರಿಡಾರ್, ಎರಡು ಕಿರು ಫ್ಲೈ ಓವರ್, ಎರಡು ಡಬಲ್ ಡೆಕ್ಕರ್ ಕಾರಿಡಾರ್ ಮತ್ತು ಎರಡು ಹೊಸ ಸುರಂಗ ರಸ್ತೆ ನಿರ್ಮಾಣ ಮಾಡುವುದು ಹೊಸ ಯೋಜನೆಯಲ್ಲಿ ಸೇರಿವೆ. ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಮೆಟ್ರೋ ರೈಲು ಯೋಜನೆ ಗಳನ್ನು ಜಾರಿಗೆ ತರಬೇಕು ಎನ್ನುವುದು ಸೇರಿದಂತೆ ಹತ್ತು ಹಲವು ಯೋಜನೆಗಳ ಅನುಷ್ಟಾನದ ವರದಿ ಸಿದ್ದ ಪಡಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ಈ ಸಂಜೆಗೆ ತಿಳಿಸಿವೆ.