ಬೆಂಗಳೂರು, ಅ.7- ಮನೆ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜೆ.ಜೆ. ನಗರದ ಪಾದರಾಯನ ಪುರ, ಹಳೇಗುಡ್ಡದ ಹಳ್ಳಿ ನಿವಾಸಿ ಉಮರ್ ಫಾರೂಕ್ ಅಲಿಯಾಸ್ ಮಹಮದ್ ಉಮರ್(24) ಬಂಧಿತ ಆರೋಪಿ. ಸಿಟಿ ಮಾರ್ಕೆಟ್‌ನ ಸಂತುಸಾ ಪೇಟೆಯ ನಿವಾಸಿ ಶಬರೀಶ್ ಎಂಬುವರು ರಾತ್ರಿ ತಮ ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಬೆಳಗಾಗುವಷ್ಟರಲ್ಲಿ ವಾಹನ ಕಳ್ಳತನವಾಗಿದ್ದ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.
ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮೂರು ಲಕ್ಷ ಬೆಲೆಬಾಳುವ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಬಂಧನದಿಂದ ಸಿಟಿ ಮಾರ್ಕೆಟ್ ಠಾಣೆಯ ಮೂರು ಪ್ರಕರಣ, ಕಾಟನ್ ಪೇಟೆ, ಬ್ಯಾಟರಾಯನಪುರ ಹಾಗೂ ಮೈಸೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿವೆ.
ಇನ್‌ಸ್ಪೆಕ್ಟರ್ ಸಂದೀಪ್ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.