Saturday, September 28, 2024
Homeಬೆಂಗಳೂರುಬೆಂಗಳೂರಲ್ಲಿ ದ್ವಿಚಕ್ರವಾಹನಗಳ ಕಳ್ಳರ ಹಾವಳಿ : ಪೊಲೀಸರು ನೀಡುವ ಸಲಹೆಗಳೇನು..?

ಬೆಂಗಳೂರಲ್ಲಿ ದ್ವಿಚಕ್ರವಾಹನಗಳ ಕಳ್ಳರ ಹಾವಳಿ : ಪೊಲೀಸರು ನೀಡುವ ಸಲಹೆಗಳೇನು..?

two-wheeler thieves in Bangalore

ಬೆಂಗಳೂರು, ಸೆ.28- ನಗರದಲ್ಲಿ ದ್ವಿಚಕ್ರವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಹಿಸಲು ವಾಹನ ಮಾಲೀಕರು ಸೂಕ್ತ ಮಾರ್ಪಾಡು ಮಾಡಿಕೊಳ್ಳುವಂತೆ ನಗರ ಪೊಲೀಸ್‌‍ ಆಯುಕ್ತರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ನಗರದಲ್ಲಿ ಸುಮಾರು 80ಲಕ್ಷ ದ್ವಿಚಕ್ರ ವಾಹನಗಳಿದ್ದು, ಪ್ರತಿದಿನ ಸುಮಾರು ಒಂದೂವರೆಯಿಂದ ಎರಡುಸಾವಿರ ವಾಹನಗಳು ಹೊಸದಾಗಿ ನೊಂದಣಿಯಾಗುತ್ತಿದೆ.

ಕಳ್ಳತನಕ್ಕೆ ಕಾರಣ:
ವಾಹನಗಳನ್ನು ಎಲ್ಲಿಂದರಲ್ಲಿ ನಿಲ್ಲಿಸುವುದು, ವಾಹನ ನಿಲ್ಲಿಸುವಾಗ ಅದರಲ್ಲಿಯೇ ಕೀ ಬಿಡುವುದು, ಸುಲಭವಾಗಿ ಹ್ಯಾಂಡಲ್‌ ಲಾಕ್‌ಗಳನ್ನು ಮುರಿಯುವಂತಹ ವಾಹನ ಬಳಸುವುದು, ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಹಳೆಯವಾಹನಗಳನ್ನು ಬಳಸುವುದು, ಸಿಸಿಟಿವಿ ಕವರೇಜ್‌ ಇಲ್ಲದ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು, ಸಾರ್ವಜನಿಕರಿಗೆ ಕಾಣದಂತೆ ನಿರ್ಜನ ಮತ್ತು ಕತ್ತಲಿನ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದೇ ಕಳ್ಳತನಕ್ಕೆ ಕಾರಣವಾಗಿವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕಳ್ಳತನ ತಡೆಗೆ ಕೈಗೊಳ್ಳಬಹುದಾದ ಕ್ರಮಗಳು: ದ್ವಿಚಕ್ರವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಕ್ತ ಮಾರ್ಪಾಡುಗಳನ್ನು ಮಾಡುವ ಬಗ್ಗೆ ವಾಹನ ಮಾರಾಟ ಮಾಡುವ ಮಾಲೀಕರು ಗ್ರಾಹಕರಿಗೆ ಆ್ಯಂಟಿ-ಥೀಫ್‌ ಮೆಜರ್‌ರ‍ಸಗಳನ್ನು ಅಳವಡಿಸಿಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಬೇಕೆಂದು ಸೂಚಿಸಲಾಗಿದೆ.

ವಾಹನ ಕಳ್ಳತನವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳಿಗೆ ಜಿಪಿಎಸ್‌‍ ಸಿಸ್ಟಮ್‌, ವ್ಹೀಲ್‌ ಲಾಕಿಂಗ್‌ ಸಿಸ್ಟಮ್‌ ಅಳವಡಿಸುವುದು, ಗಟ್ಟಿ-ಮುಟ್ಟಾದ ಆ್ಯಂಡ್‌ ಲಾಕ್‌ ಅಳವಡಿಸುವುದು ಹಾಗೂ ನಕಲಿ ಕೀಬಳಸಿ ಅಥವಾ ಸರ್ಕ್ಯೂಟ್‌ ಬ್ರೇಕ್‌ ಮಾಡಿ ವಾಹನ ಕಳ್ಳತನಕ್ಕೆ ಪ್ರಯತ್ನಿಸಿದಲ್ಲಿ ಸೈರನ್‌ ಆಗುವಂತಹ ವ್ಯವಸ್ಥೆ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಸಿಸಿಟಿವಿ ಇರುವ ವ್ಯಾಪ್ತಿಪ್ರದೇಶದಲ್ಲೇ ವಾಹನ ನಿಲ್ಲಿಸುವುದು, ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು, ವಾಹನ ನಿಲ್ಲಿಸುವಾಗ ಕೀ ಬಿಟ್ಟು ಹೋಗದಿರುವಂತೆ ಎಚ್ಚರಿಕೆ ವಹಿಸುವುದು ಸೂಕ್ತ.

ಈ ಎಲ್ಲ ಪರಿಣಾಮಕಾರಿ ಅಂಶಗಳನ್ನು ಮಾಲೀಕರು ಬಳಸುವುದರಿಂದ ವಾಹನ ಕಳ್ಳತನವನ್ನು ತಡೆಯಬಹುದಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರತಿನಿತ್ಯ ಸರಾಸರಿ 14 ರಿಂದ 16ವಾಹನಗಳು ಕಳ್ಳತನವಾಗಿವೆ.

2022ರಲ್ಲಿ 4785 ದ್ವಿ-ಚಕ್ರವಾಹನಗಳು ಕಳವು ಅಗಿದ್ದು, 1848 ಪ್ರಕರಣಗಳು ಪತ್ತೆಯಾದರೆ, 2023ರಲ್ಲಿ 5580 ಕಳವು ಪ್ರಕರಣಗಳ ಪೈಕಿ 1793 ದ್ವಿ-ಚಕ್ರವಾಹನ ಪತ್ತೆಯಾದರೆ, 2024ರಲ್ಲಿ 3263 ದ್ವಿ-ಚಕ್ರವಾಹನ ಕಳವು ಪೈಕಿ 779 ದ್ವಿ-ಚಕ್ರವಾಹನಗಳು ಮಾತ್ರ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News