Tuesday, October 8, 2024
Homeರಾಜ್ಯಬೆಚ್ಚಿಬಿದ್ದ ಉಡುಪಿ : ಹಾಡಹಗಲೇ ಚಾಕುವಿನಿಂದ ಇರಿದು ತಾಯಿ-ಮಕ್ಕಳ ಕೊಲೆ

ಬೆಚ್ಚಿಬಿದ್ದ ಉಡುಪಿ : ಹಾಡಹಗಲೇ ಚಾಕುವಿನಿಂದ ಇರಿದು ತಾಯಿ-ಮಕ್ಕಳ ಕೊಲೆ

ಬೆಂಗಳೂರು, ನ.12- ಇಡೀ ರಾಜ್ಯ ದೀಪಾವಳಿ ಹಬ್ಬದ ಸಡಗರದಲ್ಲಿರುವ ಸಂದರ್ಭ ದಲ್ಲೇ ದೂರದ ಉಡುಪಿಯಲ್ಲೊಂದು ಅಮಾನವೀಯ ಕೃತ್ಯವೊಂದು ನಡೆದು ಹೋಗಿದೆ. ಏಕಾಏಕಿ ಮನೆಗೆ ನುಗ್ಗಿದ ಮಾಸ್ಕ್ ಧರಿಸಿದ್ದ ಹಂತಕನೊಬ್ಬ ಮನೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ವೃದ್ಧೆಯೊಬ್ಬರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿನಗರದಲ್ಲಿ ನಡೆದಿದೆ.

ಈ ಘೋರ ಕೃತ್ಯದಲ್ಲಿ ಸಾವನ್ನಪ್ಪಿದ ದುರ್ದೈವಿ ಗಳನ್ನು ಹಸೀನಾ (46), ಮಕ್ಕಳಾದ ಅಪ್ನಾನ್(23), ಅಜ್ಞಾಝ್(21) ಹಾಗೂ 12 ವರ್ಷದ ಆಸೀಂ ಎಂದು ಗುರುತಿಸಲಾಗಿದೆ. ಹಂತಕನಿಂದ ಗಾಯಗೊಂಡ ಹಸೀನಾ ಅವರ ಅತ್ತೆ ಅಜೀರಾ ತಕ್ಷಣ ಸ್ನಾನದ ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸೀನಾ ಅವರ ಪತಿ ದೂರದ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆಗೊಮ್ಮೆ ಈಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಉಳಿದಂತೆ ತಾಯಿ-ಮೂರು ಮಕ್ಕಳು ಹಾಗೂ ಆತ್ತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ 8.30ರ ಸಮಯದಲ್ಲಿ ಮಾಸ್ಕ್ ಧರಿಸಿಕೊಂಡು ಏಕಾಏಕಿ ಮನೆಗೆ ನುಗ್ಗಿದ ಹಂತಕ ಮೊದಲು ಹಸೀನಾ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಇಬ್ಬರು ಹೆಣ್ಣು ಮಕ್ಕಳಿಗೂ ಇರಿದಿದ್ದಾನೆ ಇದನ್ನು ಕಂಡು ಅತ್ತೆ ಗಾಬರಿಯಿಂದ ಸ್ನಾನದ ಮನೆಗೆ ಹೋಗಿ ತಪ್ಪಿಸಿಕೊಳ್ಳಲು ಹೋದ ಅತ್ತೆ ಮೇಲೂ ಹಂತಕ ಚಾಕು ಬೀಸಿದ್ದಾನೆ ಆದರೆ, ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿ ಸ್ನಾನದ ಮನೆ ಬಾಗಿಲು ಹಾಕಿಕೊಳ್ಳುವಲ್ಲಿ ಯಶಸ್ವಿಯಾದ್ದರಿಂದ ಅವರು ಬಚಾವಾಗಿದ್ದಾರೆ.

ದೀಪಾವಳಿ ವೇಳೆ ಲಕ್ಷ್ಮೀಪೂಜೆ ಏಕೆ ಮಾಡಬೇಕು..? ಹೇಗೆ ಮಾಡಬೇಕು..?

ಈ ಸಂದರ್ಭದಲ್ಲಿ ಮನೆ ಹೊರಗೆ ಆಟವಾಡುತ್ತಿದ್ದ 12 ವರ್ಷದ ಆಸೀಂ ಒಳ ಬಂದಾಗ ಆ ಮಗುವನ್ನು ಹಂತಕ ನಿರ್ದಯವಾಗಿ ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಮನೆಯವರ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಪಕ್ಕದ ಮನೆಯ ಮಹಿಳೆ ಮನೆಗೆ ಬಂದಾಗ ಆಕೆಗೆ ಎದುರಾದ ಹಂತಕ ಕೂಗಾಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಾಸ್ಕ್ ಹಾಕಿಕೊಂಡು ಬಂದಿದ್ದ ಹಂತಕ ಮನೆಯಿಂದ ಹೊರಗೆ ತೆರಳಿ ಹೆಲ್ಮೆಟ್ ಹಾಕಿಕೊಂಡು ತಾನು ಬಂದಿದ್ದ ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಗಾಬರಿಯಿಂದ ಚೇತರಿಸಿಕೊಂಡ ಮಹಿಳೆ ವಿಷಯವನ್ನು ಅಕ್ಕಪಕ್ಕದವರಿಗೆ ತಿಳಿಸಿ ನಂತರ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಂತಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಕ್ಕಪಕ್ಕದ ಮನೆಯವರ ಸಿಸಿ ಕ್ಯಾಮರಾಗಳ ವಿಡಿಯೋ ತುಣುಕುಗಳನ್ನು ಪರಿಶೀಲಿಸುತ್ತಿದ್ದು, ಕೊಲೆಗಾರನ ಬಂಧನಕ್ಕೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.

ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿ ಮತ್ತೊಬ್ಬರನ್ನು ತೀವ್ರವಾಗಿ ಗಾಯಗೊಳಿಸಿ ಪರಾರಿಯಾಗಲು ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‍ಪಿ ಡಾ.ಕೆ.ಅರುಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಭ್ಯ ಕುಟುಂಬ: ಹಸೀನಾ ಅವರ ಕುಟುಂಬ ಕಳೆದ ಐವತ್ತು ವರ್ಷಗಳಿಂದ ತೃಪ್ತಿನಗರದಲ್ಲೇ ವಾಸಿಸುತ್ತಿದೆ. ಅವರದು ಸಭ್ಯ ಕುಟುಂಬ ಯಾವುದೆ ತಂಟೆ ತಕರಾರಿಗೂ ಹೋಗುತ್ತಿರಲಿಲ್ಲ. ಅವರ ಕುಟುಂಬ ವರ್ಗದವರು ಅನ್ಯೋನ್ಯವಾಗಿದ್ದರೂ. ದುಬೈನಲ್ಲಿರುವ ಪತಿ ಆಗೊಮ್ಮ ಈಗೊಮ್ಮೆ ಬಂದು ಹೋಗುತ್ತಿದ್ದರು. ಅವರು ಯಾರೊಂದಿಗೂ ಹಗೆ ಬೆಳೆಸಿಕೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

RELATED ARTICLES

Latest News