ಬೆಂಗಳೂರು, ಸೆ.21-ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನಿನ್ನೆಯಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ನಿನ್ನೆ ರಾತ್ರಿಯೇ ಬೆಂಗಳೂರಿನಿಂದ ನಾಗಾಲ್ಯಾಂಡ್ ರಾಜ್ಯದ ಧೀಮಾಪುರಕ್ಕೆ ತೆರಳಿದ್ದಾರೆ. ನಾಗಲ್ಯಾಂಡ್ ಮುಖ್ಯಮಂತ್ರಿ ನಿಪ್ಯು ರಿಯುಜು ಅವರು, ಧೀಮಾಪುರದಲ್ಲಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿ ದಂಪತಿಗೆ ಭೋಜನ ಕೂಟ ಏರ್ಪಡಿದ್ದರು. ಬಳಿಕ ಆ ರಾಜ್ಯದ ಕೈಗಾರಿಕಾ ಬೆಳವಣಿಗೆ, ಅಭಿವೃದ್ಧಿ ಬಗ್ಗೆ ರಿಯುಜು ಅವರೊಂದಿಗೆ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ನಾಗಾಲ್ಯಾಂಡ್ ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು, ಕೇಂದ್ರದ ಭಾರೀ ಕೈಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳು ಸಹ ಕೈಗಾರಿಕೆಗಳಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ನಾಗಲ್ಯಾಂಡ್ ರಾಜ್ಯದ ಅಂಗ್‌ಲಂಗ್ ಜಿಲ್ಲೆಯ ಕರ್ಬಿಯಲ್ಲಿರುವ ಬೋಕಾಜನ್ ಸಿಮೆಂಟ್ ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರ ಸಚಿವರು, ಕಾರ್ಖಾನೆ ವೀಕ್ಷಿಸಿ, ಅಧಿಕಾರಿಗಳು ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಸಮಸ್ಯೆಗಳು, ಸ್ಥಿತಿಗತಿ, ಚಟುವಟಿಕೆ, ವಹಿವಾಟಿನ ಬಗ್ಗೆ ಉನ್ನತ ಅಧಿಕಾರಿಗಳಿಂದ ಮಾಹಿತಿಯನ್ನು ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.