ನ್ಯೂಯಾರ್ಕ್,ಏ.15- ಅಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದ ವಿಚಾರಣೆ ಇಂದು ಆರಂಭವಾಗಲಿದೆ.ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದು ಅವರು ಈ ವರ್ಷದ ನವೆಂಬರ್‍ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿರುವುದರಿಂದ ಈ ವಿಚಾರಣೆ ಮಹತ್ವ ಪಡೆದಿದೆ.
ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ಹಗಲಿನ ವೇಳೆ ನ್ಯಾಯಾಲಯದಲ್ಲಿ ಕಳೆದು ರಾತ್ರಿ ವೇಳೆ ಚುನಾವಣಾ ಪ್ರಚಾರ ನಡೆಸುವಂಥ ವಿಕ್ಷಿಪ್ತ ಸನ್ನಿವೇಶಕ್ಕೂ ಈ ವಿಚಾರಣೆ ಸಾಕ್ಷಿಯಾಗಲಿದೆ. ಈ ವಿಚಾರಣೆ ಅಮೆರಿಕದ ನ್ಯಾಯಾಂಗಕ್ಕೂ ಒಂದು ಸತ್ವಪರೀಕ್ಷೆಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.
ತಮ್ಮ ಖಾಸಗಿ ಲೈಂಗಿಕ ಜೀವನದ ಕುರಿತು ಹರಡಿದ್ದ ವದಂತಿಗಳನ್ನು ನೇರ್ಪುಗೊಳಿಸುವ ಸಲುವಾಗಿ ಟ್ರಂಪ್ ಅವರು ಅಕ್ರಮವಾಗಿ ಹಣ ಬಳಸಿದ್ದಾರೆ ಎಂಬುದು ಅವರ ಮೇಲಿನ ಪ್ರಮುಖ ಆರೋಪವಾಗಿದೆ. ಆದರೆ ಈ ಆರೋಪಗಳು ಸುಳ್ಳು ಮತ್ತು ತಮ್ಮ ಖಾಸಗಿ ಜೀವನದ ಬಗೆಗೆ ಹಬ್ಬಿರುವುದೆಲ್ಲವೂ ಕಟ್ಟುಕಥೆಗಳು ಎಂದು ಟ್ರಂಪ್ ವಾದಿಸಿದ್ದಾರೆ.